ಬಿದರಕುಂದಿ ಗ್ರಾಪಂ ಸಭಾ ಭವನದಲ್ಲಿ ಶುಕ್ರವಾರ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಪಿಡಿಒ ಪ್ರಭು ಜಾವೂರ ವಿಷಯ ಮಂಡಿಸಿದರು. ಅಧ್ಯಕ್ಷೆ ರೂಪಾ ಚಲವಾದಿ, ಉಪಾಧ್ಯಕ್ಷೆ ಗುರುಬಾಯಿ ಹಿರೇಮಠ, ಎಡಿ ಖೂಬಾಸಿಂಗ್ ಜಾಧವ ಇತರರಿದ್ದರು. 
ಜಿಲ್ಲೆ

ಕರ್ತವ್ಯಲೋಪಗೈದ ಗ್ರಾಪಂ ಬಿಲ್ ಕಲೆಕ್ಟರ್ ವಜಾ

ಮುದ್ದೇಬಿಹಾಳ: ಸಾರ್ವಜನಿಕರ ತೆರಿಗೆ ಹಣವನ್ನು ಸ್ವಂತಕ್ಕೆ ಬಳಸಿಕೊಂಡ ಹಾಗೂ ಹಲವು ಅವ್ಯವಹಾರದ ಆರೋಪಗಳಿಗೆ ಗುರಿಯಾಗಿರುವ ಬಿದರಕುಂದಿ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ರಾಜೇಸಾಬ ಬನ್ನೆಟ್ಟಿ ಅವರನ್ನು ಸೇವೆಯಿಂದ ವಜಾಗೊಳಿಸಲು ಗ್ರಾಪಂ ಸಭಾ ಭವನದಲ್ಲಿ ಅಧ್ಯಕ್ಷೆ ರೂಪಾ ಚಲವಾದಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ಠರಾವು ಅಂಗೀಕರಿಸಲಾಯಿತು.

ಬನ್ನೆಟ್ಟಿ ವಿರುದ್ಧ ಸದಸ್ಯರು ದಾಖಲೆ ಸಮೇತ ಆರೋಪ ಮಾಡಿದ್ದರು. ಈ ಬಗ್ಗೆ ತನಿಖೆ ನಡೆದು ಶಿಸ್ತುಕ್ರಮಕ್ಕೆ ಜಿಪಂ ಸಿಇಒಗೆ ಶಿಾರಸು ಮಾಡಲಾಗಿತ್ತು. ಆದರೆ, ದುರುಪಯೋಗವಾಗಿದ್ದ 42,571 ರೂ.ಗಳನ್ನು ಪಂಚಾಯಿತಿಗೆ ಭರಿಸಿದ್ದರಿಂದ ಮೊದಲನೇ ಸಾಮಾನ್ಯ ಸಭೆಯಲ್ಲಿ ಅವರ ಮೇಲೆ ಶಿಸ್ತು ಕ್ರಮ ಜರುಗಿಸದಂತೆ ಠರಾವು ಪಾಸ್ ಮಾಡಲಾಗಿತ್ತು.

ನಕಲಿ ರಸೀದಿಗಳ ಮೂಲಕ ಸಾರ್ವಜನಿಕರಿಗೆ ಮೋಸ ಮಾಡಲಾಗುತ್ತಿದೆ ಎಂದು ಸಿಇಒಗೆ ದೂರು ಸಲ್ಲಿಕೆಯಾಗಿದ್ದರಿಂದ, ಅವರು ಗ್ರಾಪಂ ಅಧ್ಯಕ್ಷೆ ಹಾಗೂ ಪಿಡಿಒಗೆ ಪತ್ರ ಬರೆದು ಶಿಸ್ತು ಕ್ರಮಕ್ಕೆ ಸೂಚಿಸಿದ್ದರು.

ತಾಪಂ ಸಹಾಯಕ ನಿರ್ದೇಶಕ-ಯೋಜನಾಧಿಕಾರಿ ಖೂಬಾಸಿಂಗ್ ಜಾಧವ ಸರ್ಕಾರದ ಕ್ರಮದ ಕುರಿತು ಸಭೆಗೆ ವಿವರಿಸಿದರು. ಪಿಡಿಒ ಪ್ರಭು ಜಾವೂರ ಅವರು ವಿಷಯ ಮಂಡಿಸಿ ಸದಸ್ಯರ ಒಪ್ಪಿಗೆ ಕೇಳಿದರು.

15 ಸದಸ್ಯರ ಪೈಕಿ ಸಭೆಯಲ್ಲಿ ಹಾಜರಿದ್ದ 13 ಸದಸ್ಯರು ಬನ್ನೆಟ್ಟಿ ಅವರ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆ ಅವರನ್ನು ವಜಾಗೊಳಿಸುವ ನಿರ್ಣಯಕ್ಕೆ ಒಮ್ಮತದ ಒಪ್ಪಿಗೆ ನೀಡಲಾಯಿತು.

ಕಾರ್ಯದರ್ಶಿ ಪರಶುರಾಮ ಚಲವಾದಿ, ಉಪಾಧ್ಯಕ್ಷೆ ಗುರುಬಾಯಿ ಹಿರೇಮಠ, ಸದಸ್ಯರಾದ ಮಹ್ಮದರಸೂಲ ಬಿದರಕುಂದಿ, ಲಾಲಬಿ ಮುಲ್ಲಾ, ಗುಂಡಪ್ಪ ಕೊಟಗಿ, ವಿಜಯಲಕ್ಷ್ಮೀ ಚಲವಾದಿ, ನಾಗಮ್ಮ ಸಿದ್ದನಾಥ, ಮಲ್ಲಪ್ಪ ದೊಡಮನಿ, ಲಕ್ಷ್ಮಿಬಾಯಿ ಮಾದರ, ನೀಲಮ್ಮ ಕೋಳೂರ, ಕಮಲಾ ವಿಜಯಕರ್, ಜನ್ನತಬಿ ದೊಡಮನಿ, ಹಣಮಂತ ಚಲವಾದಿ ಇದ್ದರು.