ಮಂಜುನಾಥ ಅಂಗಡಿ ಧಾರವಾಡ
ಸರ್ಕಾರ ಸ್ಥಳೀಯ ಸಂಸ್ಥೆಗಳಲ್ಲಿ ಇ ಅಟೆಂಡೆನ್ಸ್ ಜಾರಿಗೊಳಿಸಿದೆ. ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆಯಬೇಕಿರುವುದರಿಂದ ಸದಸ್ಯರಿಲ್ಲದೆ ಅಧಿಕಾರಿಗಳ ಆಡಳಿತವಿದೆ. ಗ್ರಾಮ ಪಂಚಾಯಿತಿಗಳಲ್ಲಿ ಬಯೋಮೆಟ್ರಿಕ್ ಮೂಲಕ ಹಾಜರಾತಿ ದಾಖಲಿಸಿಕೊಳ್ಳುವ ಪ್ರಕ್ರಿಯೆ ಕಳೆದ 2 ತಿಂಗಳಿಂದ ಜಾರಿಯಲ್ಲಿದೆ.
ಗ್ರಾ.ಪಂ.ಗಳಲ್ಲಿ ಗ್ರಾಮಸಭೆಗಳು, ವಾರ್ಡ್ ಸಭೆಗಳು, ತುರ್ತು ಸಭೆ, ಸಾಮಾನ್ಯ ಸಭೆಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಆದರೆ, ಬಹುಪಾಲು ಸದಸ್ಯರ ನಿರಾಸಕ್ತಿಯಿಂದ ಯಶಸ್ವಿಯಾಗುವುದಿಲ್ಲ. ಸಭೆಯ ನಿಗದಿತ ಸಮಯಕ್ಕೆ ಹಾಜರಾಗದ ಸದಸ್ಯರು ಕಾಟಾಚಾರಕ್ಕೆ ಬೇಕಾದಾಗ ಹೋಗಿ ಸಹಿ ಮಾಡಿ ಮತ್ತೆಲ್ಲೋ ಹೋಗುವುದು ಸಾಮಾನ್ಯ ಸಂಗತಿಯಂತಾಗಿದೆ. ಇದನ್ನು ತಪ್ಪಿಸಿ, ಸಭೆ ಮುಗಿಯುವವರೆಗೆ ಹಾಜರಾಗುವುದನ್ನು ಕಡ್ಡಾಯಗೊಳಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇ ಅಟಂಡೆನ್ಸ್ ವ್ಯವಸ್ಥೆಯನ್ನು ಪರಿಚಯಿಸಿದೆ.
ಗ್ರಾಮಗಳಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳು, ಕ್ರಿಯಾಯೋಜನೆ, ಇತರ ಕಾಮಗಾರಿಗಳ ಅನುಷ್ಠಾನಕ್ಕೆ ಒಮ್ಮತ ಅಗತ್ಯ. ಆದರೆ, ಕೆಲ ಸದಸ್ಯರ ಗೈರು ಹಾಜರಿಯಿಂದ ಅನುಷ್ಠಾನ ಕಷ್ಟ. ಆದರೂ ಕೆಲ ಸದಸ್ಯರು ಪಂಚಾಯಿತಿಗಳಿಗೆ ನಾಮ್ ಕೇ ವಾಸ್ತೆ ಹೋಗುವುದು ರೂಢಿಯಲ್ಲಿದೆ. ಸಾಮಾನ್ಯ ಸಭೆಗೆ ಕೇವಲ 100 ರೂ. ಭತ್ಯೆ ಇದ್ದು, ಸದಸ್ಯರು ಸಹಿ ಹಾಕಿ ಬೇರೆ ಕೆಲಸಗಳಿಗೆ ಹೋಗುವುದನ್ನು ತಪ್ಪಿಸಲಾಗುತ್ತಿರಲಿಲ್ಲ. ಈ ಪದ್ಧತಿಯನ್ನು ಹೋಗಲಾಡಿಸಲು ಸಭೆಗೆ ಮೊದಲು ಮತ್ತು ಸಭೆಯ ನಂತರ ಬಯೋಮೆಟ್ರಿಕ್ ಪಡೆಯುವ ವ್ಯವಸ್ಥೆ ಜಾರಿಗೆ ತರಲಾಗಿದೆ.
ಸದಸ್ಯರ ಬೆರಳುಗಳ ಗುರುತುಗಳನ್ನು ಮೊದಲೇ ದಾಖಲಿಸಿಕೊಳ್ಳಲಾಗಿದೆ. ಸಭೆಗಳಿಗೆ ಹಾಜರಾಗುವ ಸದಸ್ಯರ ಬಯೋಮೆಟ್ರಿಕ್ ಪಡೆದು ಹಾಜರಾತಿಯನ್ನು ದೃಢೀಕರಿಸಲಾಗುತ್ತಿದೆ. ಯಾವುದೇ ನಿರ್ಧಾರ ಕೈಗೊಳ್ಳಲು ಎದುರಾಗುತ್ತಿದ್ದ ಕೋರಂ ಕೊರತೆಯನ್ನೂ ತಪ್ಪಿಸಲು ಈ ವ್ಯವಸ್ಥೆ ನೆರವಾಗುತ್ತಿದೆ.
ಸದ್ಯ ಗ್ರಾ.ಪಂ. ಅಧ್ಯಕ್ಷರಿಗೆ ಮಾಸಿಕ 6,000 ರೂ., ಉಪಾಧ್ಯಕ್ಷರಿಗೆ 4,000 ರೂ. ಹಾಗೂ ಸದಸ್ಯರಿಗೆ 2,000 ರೂ. ಗೌರವಧನ ನೀಡಲಾಗುತ್ತಿದೆ. ಗೌರವಧನ ಹೆಚ್ಚಳಕ್ಕೆ ಒತ್ತಾಯಿಸಿ ಗ್ರಾ.ಪಂ. ಸದಸ್ಯರ ರಾಜ್ಯ ಮಹಾಒಕ್ಕೂಟ ಹಲವು ವರ್ಷಗಳಿಂದ ಹೋರಾಟ ಮಾಡುತ್ತಿದೆ. ಅಲ್ಲದೆ, ಮಾಜಿಯಾಗುವ ಸದಸ್ಯರಿಗೆ ಪಿಂಚಣಿ ರೂಪದಲ್ಲಿ ಕನಿಷ್ಠ ಗೌರವಧನ ನಿಗದಿಪಡಿಸಬೇಕು ಎಂಬ ಬೇಡಿಕೆ ನನೆಗುದಿಗೆ ಬಿದ್ದಿದೆ.
ಪಂಚಾಯಿತಿ ಸಭೆಗಳಿಗೆ ಅನೇಕ ಸದಸ್ಯರು ಗೈರಾಗುತ್ತಿದ್ದರು. ಮತ್ತೆ ಕೆಲವರು ಕಾಟಾಚಾರಕ್ಕೆ ಬಂದು ಸಹಿ ಮಾಡಿ ಹೋಗುತ್ತಿದ್ದರು. ಆದರೆ, ಇ ಅಟೆಂಡೆನ್ಸ್ ವ್ಯವಸ್ಥೆ ಬಂದ ನಂತರ ಬೆಳಗ್ಗೆ ಮತ್ತು ಸಂಜೆ ಎರಡು ಬಾರಿ ಬಯೊಮೆಟ್ರಿಕ್ ನೀಡಬೇಕು. ಇದರಿಂದ ಸದಸ್ಯರ ಹಾಜರಾತಿಯಲ್ಲಿ ಹೆಚ್ಚಳವಾಗಿದ್ದು, ಪಂಚಾಯಿತಿ ಮಟ್ಟದಲ್ಲಿ ಇದು ಅನುಕೂಲಕರ ವ್ಯವಸ್ಥೆಯಾಗಿದೆ. ಗಂಗಪ್ಪ ಭೀಮಪ್ಪ ಮುಮ್ಮಿಗಟ್ಟಿ, ಯಾದವಾಡ ಗ್ರಾ.ಪಂ. ಅಧ್ಯಕ್ಷ