ಅರಸೀಕೆರೆ : ಪದವಿ ಶಿಕ್ಷಣ ಬದುಕಿನ ಮಹತ್ವದ ಘಟ್ಟ ಎಂಬುದನ್ನು ವಿದ್ಯಾರ್ಥಿಗಳು ಮರೆಯಬರದು ಎಂದು ಹೊಯ್ಸಳೇಶ್ವರ ಪದವಿ ಕಾಲೇಜು ಸಲಹಾ ಸಮಿತಿ ಅಧ್ಯಕ್ಷ ಜಿ.ಬಿ.ಶಶಿಧರ್ ಹೇಳಿದರು.
ನಗರದ ಹೊಯ್ಸಳೇಶ್ವರ ಪದವಿ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಭಗತ್‌ಸಿಂಗ್ ಜನ್ಮದಿನಾಚರಣೆ ಹಾಗೂ ಪ್ರಥಮ ವರ್ಷದ ಬಿಎ, ಬಿಸ್ಸಿ ಹಾಗೂ ಬಿಕಾಂ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣ ಪಡೆಯುವ ಹಂತದಲ್ಲಿ ಶಿಕ್ಷಕರ ಹಿಡಿತವಿರುತ್ತದೆ. ಆದರೆ ಪದವಿ ವ್ಯಾಸಂಗಕ್ಕೆ ದಾಖಲಾದ ಬಳಿಕ ಆಯ್ಕೆಗೆ ಅವಕಾಶಗಳಿದ್ದು ಯಾವುದೇ ಕಾರಣಕ್ಕೂ ಎಚ್ಚರ ತಪ್ಪಬಾರದು. ಜನ್ಮ ನೀಡಿದ ಪಾಲಕರು, ಕಲಿತ ಶಾಲೆ ಹಾಗೂ ಗುರು ವೃಂದಕ್ಕೆ ಅಗೌರವ ತರುವ ರೀತಿಯಲ್ಲಿ ನಡೆದುಕೊಳ್ಳಬಾರದು ಎಂದು ಸಲಹೆ ನೀಡಿದರು.
ಕನ್ನಡ ವಿಭಾಗದ ಉಪನ್ಯಾಸಕ ಶೇಖರ್ ಸಂಕೋಡನಳ್ಳಿ ಶಿಕ್ಷಣ ಕ್ಷೇತ್ರಕ್ಕೆ ಶ್ರೀ ಮಠದ ಕೊಡುಗೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿಧ ಆಟೋಟಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಮೂರು ವಿಭಾಗದ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಗಮನಸೆಳೆಯಿತು. ದೈಹಿಕ ಶಿಕ್ಷಣ ನಿರ್ದೇಶಕ ಎನ್.ಬಿ.ರೇವಣ್ಣ, ಉಪನ್ಯಾಸಕರಾದ ಆರ್.ಮಂಜುನಾಥ್, ಅಯೂಬ್, ಪೂರ್ಣಿಮಾ, ನಾಗರತ್ನ, ಸುಮಾ, ಮೇಘಾ, ಶಶಿಕುಮಾರ್, ಪಾರ್ವತಮ್ಮ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.