ವಿಜಯವಾಣಿ ಸುದ್ದಿಜಾಲ ಉಳ್ಳಾಲ
ದೇಶದಲ್ಲಿ ಆರೋಗ್ಯ ಸೇವಾ ತಜ್ಞರ ಕೊರತೆ ಗಂಭೀರವಾಗಿದ್ದು ಇತ್ತೀಚಿನ ದಿನಗಳಲ್ಲಿ ಈ ಕ್ಷೇತ್ರಕ್ಕೆ ಪ್ರಾಮುಖ್ಯ ದೊರೆತಿದೆ ಎಂದು ಮುಖ್ಯಮಂತ್ರಿಯವರ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಎಲ್.ಕೆ.ಅಥೀಕ್ ಹೇಳಿದರು.
ನಾಟೆಕಲ್ ಕಣಚೂರು ಇಸ್ಲಾಮಿಕ್ ಎಜುಕೇಷನ್ ಟ್ರಸ್ಟ್ ಆಶ್ರಯದಲ್ಲಿ ಕಣಚೂರು ಕಾನ್ಫರೆನ್ಸ್ ಹಾಲ್‌ನಲ್ಲಿ ಶನಿವಾರ ಫಿಸಿಯೋಥೆರಪಿ, ನರ್ಸಿಂಗ್ ಸೈನ್ಸ್ ಹಾಗೂ ಅಲೈಡ್ ಹೆಲ್ತ್ ಸೈನ್ಸಸ್ ಸಂಸ್ಥೆಯ ದ್ವಿತೀಯ ವರ್ಷದ ಪದವಿ ಪ್ರದಾನ ಮಾಡಿ ಮಾತನಾಡಿದರು.
ಆರೋಗ್ಯ ವೃತ್ತಿಪರರು ಕುಟುಂಬ, ನೆರೆಹೊರೆ ಮತ್ತು ದೇಶದ ಅಭಿವೃದ್ಧಿಗೆ ನೇರವಾಗಿ ಕೊಡುಗೆ ನೀಡುತ್ತಾರೆ. ಆರೋಗ್ಯ ಸೇವಾ ವಿಜ್ಞಾನ ಅಧ್ಯಯನ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರಲ್ಲಿ ತಾಂತ್ರಿಕ ಜ್ಞಾನಕ್ಕಿಂತಲೂ ಹೆಚ್ಚು ದಯಾಗುಣ ಅಗತ್ಯ. ನಿಷ್ಕಲ್ಮಶ ಪ್ರೀತಿ, ವೃತ್ತಿಪರತೆ, ಸತತ ಶ್ರದ್ಧೆಯೊಂದಿಗೆ ಕೆಲಸ ಮಾಡುವ ಗುಣಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದರು.
ಕಣಚೂರು ಇಸ್ಲಾಮಿಕ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ.ಯು.ಕೆ.ಮೋನು ಅಧ್ಯಕ್ಷತೆ ವಹಿಸಿದ್ದರು. ಕಣಚೂರು ಆಸ್ಪತ್ರೆ ಆಡಳಿತಾಧಿಕಾರಿ ಡಾ.ರೋಹನ್ ಮೋನಿಸ್, ಟ್ರಸ್ಟಿ ಝೊಹರ ಮೋನು, ಡಾ.ಶಹನವಾಝ್, ಡಾ.ವೆಂಕಟರಾಯ ಪ್ರಭು, ಡಾ.ಮಹಮ್ಮದ್ ಇಸ್ಮಾಯಿಲ್ ಹೆಜಮಾಡಿ, ಕಣಚೂರು ಫಿಸಿಯೋಥೆರಪಿ ಕಾಲೇಜು ಪ್ರಾಂಶುಪಾಲ ಡಾ.ಮೊಹಮ್ಮದ್ ಸುಹೈಲ್, ಕಣ್ಣೂರು ವಿವಿ ವಿಶ್ರಾಂತ ಉಪಕುಲಪತಿ ಡಾ.ಅಬ್ದುಲ್ ರಹ್ಮಾನ್, ಡಾ.ಅಂಜನ್ ಕುಮಾರ್, ಡಾ.ಮೋನಿ ಸಲ್ದಾನ, ಡಾ.ಶಮೀಮ ಮೊದಲಾದವರು ಉಪಸ್ಥಿತರಿದ್ದರು. ಕಣಚೂರು ಮೆಡಿಕಲ್ ಕಾಲೇಜು ಹಾಗೂ ಸಂಶೋಧನಾ ಕೇಂದ್ರ ನಿರ್ದೇಶಕ ಅಬ್ದುಲ್ ರಹ್ಮಾನ್ ಸ್ವಾಗತಿಸಿದರು.
ಮೂವರಿಗೆ ಚಿನ್ನದ ಪದಕ
ಬಿ.ಎಸ್.ಸಿ. ರಿನಲ್ ಡಯಾಲಿಸಿಸ್ ತಂತ್ರಜ್ಞಾನ ವಿಭಾಗದಲ್ಲಿ ಶಿಜಾನಾ ಓವರಾಲ್ ಟಾಪರ್ ಆಗಿ ಹೊರಹೊಮ್ಮಿದರು. ಬ್ಯಾಚುಲರ್ ಆಫ್ ಫಿಸಿಯೋಥೆರಪಿ ವಿಭಾಗದ ಡಾ.ಅಸ್ಮಿತಾ ಹಾಗೂ ಮಾಸ್ಟರ್ಸ್ ಆಫ್ ಫಿಸಿಯೋಥೆರಪಿ ವಿಭಾಗದ ಡಾ.ಅಥುಲ್ಯಾ ಪಿ.ಕೆ. ಅವರು ಡಾ.ಕಣಚೂರು ಮೋನು ಚಿನ್ನದ ಪದಕ ಪಡೆದರು. ಕಣಚೂರು ಇನ್‌ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್‌ನ 14 ವಿದ್ಯಾರ್ಥಿಗಳು ವಿವಿ ಮಟ್ಟದಲ್ಲಿ ಶ್ರೇಷ್ಠ ಸ್ಥಾನ ಪಡೆದರು. ಡಾ.ಆರ್ಜಿ ಶಾ ಅವರು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಚಿನ್ನದ ಪದಕಕ್ಕೆ ಭಾಜನರಾದರು.
ಶಿಕ್ಷಣ ಪಡೆದವರು ಒಳ್ಳೆಯ ಪ್ರಜೆಗಳಾಗಬೇಕೇ ಹೊರತು ಮೈಗಳ್ಳರಾಗಬಾರದು. ಜೀವನದ ಮುಂದಿನ ಹಂತದ ದಾರಿ ಹುಡುಕುವ ಸಮಯ ನಿಮ್ಮದು. ಕಣಚೂರು ಶಿಕ್ಷಣ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ದೇಶಕ್ಕಾಗಿ ಒಳ್ಳೆಯ ಕೆಲಸ ಮಾಡಬೇಕು. ಸಂವಿಧಾನ ನಮಗೆ ಎಲ್ಲವನ್ನೂ ಕೊಟ್ಟಿದೆ. ನಾಲ್ಕು ವರ್ಷ ಕಲಿತ ಶಿಕ್ಷಣ ವ್ಯರ್ಥ ಮಾಡಬಾರದು. ಡಾ.ಯು.ಕೆ.ಮೋನು ಅಧ್ಯಕ್ಷ, ಕಣಚೂರು ಇಸ್ಲಾಮಿಕ್ ಎಜುಕೇಷನ್ ಟ್ರಸ್ಟ್