ರಾಣೆಬೆನ್ನೂರ: ಮನುಷ್ಯನಿಗೆ ಪರಿಸರದ ಅವಶ್ಯಕತೆಯಿದೆಯೇ ಹೊರತು ಪರಿಸರಕ್ಕೆ ಮನುಷ್ಯನ ಅವಶ್ಯವಿಲ್ಲ. ಇದನ್ನು ಪ್ರತಿಯೊಬ್ಬರೂ ತಿಳಿದುಕೊಂಡು ಪರಿಸರ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ನಗರದ ಹಳೆ ಅಂತರವಳ್ಳಿ ರಸ್ತೆಯಲ್ಲಿ ಭಾನುವಾರ ಸ್ಥಳೀಯ ಕೃಷಿ ಪದವೀಧರರ ಸಂಘದ ವತಿಯಿಂದ ಏರ್ಪಡಿಸಿದ್ದ ವೃಕ್ಷಾಪರೋಹಣ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಭೂಮಿ ತನಗೆ ಬೇಡವಾದದನ್ನು ಉಳಿಸಿಕೊಳ್ಳುವುದಿಲ್ಲ. ಅದಕ್ಕೆ ಹೊಂದಿಕೊಳ್ಳದೆ ನಾವು ಇರುವುದಿಲ್ಲ. ಆದರೆ, ಅಭಿವೃದ್ಧಿ ಸೇರಿ ಇತರ ಹೆಸರಿನಲ್ಲಿ ಭೂಮಿತಾಯಿಗೆ ಮಾಡಿರುವ ಅನ್ಯಾಯ ತಡೆಯಬೇಕಾಗಿದೆ. ನಾವೆಲ್ಲರೂ ಪ್ರಸ್ತುತ ಕಾಲಘಟ್ಟದಲ್ಲಿ ಭೂಮಿಯ ಸಂರಕ್ಷಣೆ ಮಾಡಬೇಕಿದೆ. ಇದಕ್ಕಾಗಿ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ ಕಾರ್ಬನ್ ಕ್ರೆಡಿಟ್ಸ್ ಬಗ್ಗೆ ಅಧ್ಯಯನ ಮಾಡಬೇಕಾಗಿದೆ. ನಗರವನ್ನು ಹಸಿರೀಕರಣ ಮಾಡುವ ನಿಟ್ಟಿನಲ್ಲಿ ಎಲ್ಲರೂ ಸೇರಿ ಪ್ರತಿಯೊಂದು ಮನೆಗೆ ಗಿಡ ಹಚ್ಚುವ ಕೆಲಸ ಮಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕೃಷಿ ಪದವೀಧರರ ಸಂಘದ ಅಧ್ಯಕ್ಷ ಎಚ್.ಎನ್. ದೇವಕುಮಾರ ಮಾತನಾಡಿ, ಎಲ್ಲರ ಸಹಕಾರ ಪಡೆದು ನಗರದ ಹಸರೀಕರಣಕ್ಕಾಗಿ ಶ್ರಮವಹಿಸಲಾಗಿದೆ. ಪ್ರತಿಯೊಬ್ಬರೂ ಸ್ವಯಂ ಪ್ರೇರಿತವಾಗಿ ಬಂದು ಸಸಿಗಳನ್ನು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ಸಂಘದ ವತಿಯಿಂದ ಮತ್ತಷ್ಟು ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.