ಜಿಲ್ಲೆ

ಪದವೀಧರರೇ ಕೃಷಿ ವಿವಿ ರಾಯಭಾರಿಗಳು: ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿಕೆ

ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ (ಯುಎಎಸ್‌ಬಿ) ವಿದ್ಯಾಭ್ಯಾಸ ಮಾಡಿ ಹೊರಬರುವ ಪದವೀಧರರೇ ಈ ವಿವಿಯ ನೈಜ ರಾಯಭಾರಿಗಳು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅಭಿಪ್ರಾಯಪಟ್ಟರು.

ಜಿಕೆವಿಕೆ ಕ್ಯಾಂಪಸ್‌ನ ಡಾ. ಬಾಬು ರಾಜೇಂದ್ರ ಪ್ರಸಾದ್ ಅಂತಾರಾಷ್ಟ್ರೀಯ ಸಮಾವೇಶ ಭವನದಲ್ಲಿ ಗುರುವಾರ ಆಯೋಜಿಸಿದ್ದ ವಿವಿಯ 60ನೇ ಸಂಸ್ಥಾಪನಾ ದಿನಾಚರಣೆ, ಜಲಾನಯನ ನಿರ್ವಹಣೆಯ ಉತ್ಕೃಷ್ಠ ಕೇಂದ್ರದ ನವೀಕರಿಸಿದ ಕಟ್ಟಡ ಹಾಗೂ ಸೂಕ್ಷ್ಮ ನೀರಾವರಿ ಪರಿಕರಗಳ ಗುಣಮಟ್ಟ ಪರೀಕ್ಷಾ ಪ್ರಯೋಗಾಲಯ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ 75 ಕೃಷಿ ವಿವಿಗಳಲ್ಲಿ ಯುಎಎಸ್‌ಬಿ 11ನೇ ಸ್ಥಾನದಲ್ಲಿದೆ. ನ್ಯಾಕ್ ಸಂಸ್ಥೆಯಿಂದ ಎ ಪ್ಲಸ್ ಶ್ರೇಣಿ ಪಡೆದುಕೊಂಡಿದ್ದು, ಎನ್‌ಐಆರ್‌ಎ್ ರ‌್ಯಾಂಕಿಂಗ್‌ನಲ್ಲಿ 11ನೇ ಸ್ಥಾನ ದೊರೆತಿದೆ. ಕೃಷಿ ವಿವಿ 60 ವರ್ಷ ನಡೆದು ಬಂದ ದಾರಿ ಸುಗಮವಾಗಿರಲಿಲ್ಲ. ಹಲವರ ದುಡಿಮೆ, ಶ್ರಮ ಹಾಗೂ ತ್ಯಾಗದ ಲವಾಗಿ ಇಂದು ಬೃಹತ್ ಸಂಸ್ಥೆಯಾಗಿ ಬೆಳೆದುನಿಂತಿದೆ. ಇಲ್ಲಿ ಕಲಿತ ಅನೇಕರು ದೇಶದ ವಿವಿಧ ವಿವಿಗಳಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಸರ್ಕಾರಿ ನೌಕರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಉನ್ನತ ಸ್ಥಾನದಲ್ಲಿರುವುದು ಕರ್ನಾಟಕಕ್ಕೆ ಕೀರ್ತಿ ತಂದಿದೆ ಎಂದರು.

ಹಸಿರು ಕ್ರಾಂತಿ ಹಿಂದಿದೆ ವಿಜ್ಞಾನಿಗಳ ಶ್ರಮ:

ಪ್ರಸ್ತುತ ದೇಶವು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಆಗಿದೆ. ಆದರೆ, ಸ್ವಾತಂತ್ರ್ಯ ಬಂದ ವರ್ಷಗಳಲ್ಲಿ ಆಹಾರದ ಕೊರತೆಯಿಂದ ದೇಶವಾಸಿಗಳಿಗೆ ತಿನ್ನಲು ಅನ್ನಕ್ಕಾಗಿ ಪರದಾಡುತ್ತಿದ್ದರು. ಸರ್ಕಾರದ ಸಹಯೋಗದಲ್ಲಿ ಹಸಿರು ಕ್ರಾಂತಿ ಕೈಗೊಂಡ ದಶಕಗಳ ಬಳಿಕ ನಾವೀಗ ಸ್ವಾವಲಂಬಿ ರಾಷ್ಟ್ರವಾಗಿದ್ದೇವೆ. ಇದರ ಹಿಂದೆ ರೈತರು ಹಾಗೂ ಕೃಷಿ ವಿಜ್ಞಾನಿಗಳ ಶ್ರಮ ಸಾಕಷ್ಟಿದೆ ಎಂದು ಗೃಹ ಸಚಿವರು ಸ್ಮರಿಸಿದರು.

ಭವಿಷ್ಯದ ತಂತ್ರಜ್ಞಾನಕ್ಕೆ ಒತ್ತು ನೀಡಿ:

ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಯುಎಎಸ್‌ಬಿ ಕೃಷಿ ಶಿಕ್ಷಣ, ಸಂಶೋಧನೆ ಹಾಗೂ ವಿಸ್ತರಣಾ ಚಟುವಟಿಕೆಗಳ ಮೂಲಕ ರೈತರಿಗೆ ಶಕ್ತಿ ತುಂಬವ ಜತೆಗೆ ರಾಷ್ಟ್ರವು ಸಮೃದ್ಧಿಯತ್ತ ಹೆಜ್ಜೆಯಿರಿಸಲು ಅವಿರತವಾಗಿ ಶ್ರಮಿಸುತ್ತಿದೆ. ಮುಂದಿನ ದಿನಗಳಲ್ಲಿ ಡ್ರೋನ್ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಹಾಗೂ ಡಿಜಿಟಲ್ ಕೃಷಿಗೆ ಹೆಚ್ಚಿನ ಒತ್ತು ನೀಡಿ ನವೀನ ಆವಿಷ್ಕಾರವನ್ನು ಅನ್ನದಾತರಿಗೆ ತಲುಪಿಸಬೇಕು ಎಂದು ಕಿವಿಮಾತು ಹೇಳಿದರು.

ಕೃಷಿ ಇಲಾಖೆಯ 43 ಪ್ರಯೋಗಾಲಯಗಳು ಎನ್‌ಎಬಿಎಲ್ ಮಾನ್ಯತೆ ಪಡೆದ ಮೊದಲ ರಾಜ್ಯವಾಗಿದೆ. ಇದಕ್ಕಾಗಿ 6 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಆಹಾರ ಸಂಸ್ಕರಣಾ ಉದ್ದಿಮೆ ಯೋಜನೆಯಡಿ 5 ಸಾವಿರ ಕಿರು ಘಟಕಗಳ ಸ್ಥಾಪನೆಗೆ 206 ಕೋಟಿ ರೂ. ಅನುದಾನ ಬಜೆಟ್‌ನಲ್ಲಿ ಮೀಸಲಿಡಲಾಗಿದೆ ಎಂದು ಸಚಿವರು ವಿವರಿಸಿದರು.

ಕಾರ್ಯಕ್ರಮದಲ್ಲಿ ಕೇಂದ್ರದ ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಡಾ. ಮಂಗಿಲಾಲ್ ಜಾಟ್, ಜಲಾನಯನ ಅಭಿವೃದ್ಧಿ ಇಲಾಖೆಯ ಆಯುಕ್ತ ಉಪೇಂದ್ರ ಪ್ರತಾಪ್ ಸಿಂಗ್, ವಿವಿಯ ಕುಲಪತಿ ಡಾ. ಎಸ್.ವಿ. ಸುರೇಶ್, ಕುಲಸಚಿವ ಡಾ. ಕೆ.ಸಿ. ನಾರಾಯಣಸ್ವಾಮಿ ಮತ್ತು ಆಡಳಿತ ಮಂಡಳಿಯ ಸದಸ್ಯರು ಹಾಜರಿದ್ದರು.

96 ಮಂದಿಗೆ ಪ್ರಶಸ್ತಿ ಪ್ರದಾನ:

ಇದೇ ವೇಳೆ ವಿವಿಯ ಸಾಧಕ ವಿದ್ಯಾರ್ಥಿಗಳು, ಶಿಕ್ಷಕರು, ವಿಜ್ಞಾನಿಗಳು, ವಿಸ್ತರಣಾ ಕಾರ್ಯಕರ್ತರು ಹಾಗೂ ಬೋಧಕ/ಬೋಧಕೇತರ ಸಿಬ್ಬಂದಿಯ ಅತ್ಯುತ್ತಮ ಕೊಡುಗೆ ಪರಿಗಣಿಸಿ ಒಟ್ಟು 96 ಮಂದಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಡಾ. ಕರುಣಾಕರನ್‌ಗೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನ:

ಯುಎಎಸ್‌ಬಿ ಪ್ರತಿವರ್ಷ ನೀಡುವ ಕಾಳಯ್ಯ ಕೃಷ್ಣಮೂರ್ತಿ ರಾಷ್ಟ್ರೀಯ ಪ್ರಶಸ್ತಿಯನ್ನು ಹೆಸರಘಟ್ಟದ ಐಐಎಚ್‌ಆರ್ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ. ಜಿ.ಕರುಣಾಕರನ್ ಅವರಿಗೆ ಪ್ರದಾನ ಮಾಡಲಾಯಿತು. ನಾಗಮ್ಮ ದತ್ತಾತ್ರೇಯ ರಾವ್ ದೇಸಾಯಿ ಬಹುಮಾನ ಪ್ರಶಸ್ತಿಯು ಶಿವಮೊಗ್ಗದ ತೊಟಗಾರಿಕಾ ವಿವಿಯ ಪ್ರಾಧ್ಯಾಪಕ ಡಾ. ನಾಗರಾಜಪ್ಪ ಅಡಿವಪ್ಪರ್, ದಿವ್ಯ ಚೇತನ ಶ್ರೀ ಎಸ್.ಎಂ.ಕೃಷ್ಣ ಕೃಷಿ ವಿಜ್ಞಾನ ಪ್ರಶಸ್ತಿಯು ಜಿಕೆವಿಕೆಯ ಸಹಾಯಕ ಪ್ರಾಧ್ಯಾಪಕ ಡಾ. ಎಚ್.ಬಿ. ಮಹೇಶ್, ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿಯು ಮೈಸೂರು ನಾಗೇನಹಳ್ಳಿ ಕೇಂದ್ರದ ಪ್ರಾಧ್ಯಾಪಕ ಡಾ. ಸಿ.ರಾಮಚಂದ್ರ, ಉತ್ತಮ ಕ್ಷೇತ್ರ ಅಧೀಕ್ಷಕರ ಪ್ರಶಸ್ತಿಯು ಕುಣಿಗಲ್‌ನ ಕೃಷಿ ಸಂಶೋಧನಾ ಕೇಂದ್ರದ ಡಾ. ಕೆ.ಆರ್.ಶ್ರೀನಿವಾಸ್ ಅವರಿಗೆ ವಿತರಿಸಲಾಯಿತು.

ಕನ್ನಡ ಕೃಷಿ ಪುಸ್ತಕ ಪ್ರಶಸ್ತಿಯನ್ನು ವಿಜಯಪುರ ಮೀನುಗಾರಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ಎಸ್.ವಿಜಯಕುಮಾರ್, ಮಂಗಳೂರು ಮೀನುಗಾರಿಕೆ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಗಣೇಶ್ ಪ್ರಸಾದ್ ಹಾಗೂ ಡಾ. ವಿಜಯ ಎಸ್. ಅತನೂರ್ ಅವರಿಗೆ ನೀಡಲಾಯಿತು.