ಹೂವಿನಹಡಗಲಿ: ಮನುಷ್ಯ ದುಶ್ಚಟಗಳಿಗೆ ಬಲಿಯಾಗುವ ಮೂಲಕ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾನೆ ಎಂದು ಸರ್ಕಾರಿ ಸಹಾಯಕ ಅಭಿಯೋಜಕ ಕೆ.ಅಜ್ಜಯ್ಯ ಹೇಳಿದರು.
ಮಾದಕ ದ್ರವ್ಯ ವಿರೋಧಿ ದಿನಾಚರಣೆ ನಿಮಿತ್ತ ಪಟ್ಟಣದ ಉಪಕಾರಾಗೃಹದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ತಾಲೂಕು ವಕೀಲರ ಸಂಘ ಮತ್ತು ಉಪಕಾರಾಗೃಹ ಇಲಾಖೆ ಸೋಮವಾರ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು. ಮಾದಕ ವಸ್ತುಗಳು ಮಾನವನ ಕ್ರಮೇಣ ದೇಹ ಮತ್ತು ಅಂಗಾಂಗಗಳ ಶಕ್ತಿಯನ್ನು ಕುಂಠಿತಗೊಳಿಸುತ್ತವೆ. ಕುಟುಂಬ ಜವಾಬ್ದಾರಿ ನಿಭಾಯಿಸುವರು ದುಶ್ಚಟಗಳ ದಾಸರಾಗುವ ಮೂಲಕ ಪ್ರಾಣ ಕಳೆದುಕೊಳ್ಳುವ ಹಂತಕ್ಕೆ ತಲುಪುತ್ತಿದ್ದಾರೆ ಎಂದರು.
ಉಪಕಾರಾಗೃಹ ಅಧೀಕ್ಷಕ ಶರಣಬಸವ ಇನಾಮದಾರ್ ಮಾತನಾಡಿ, ಮಾದಕ ವಸ್ತುಗಳು ಮನುಷ್ಯನ ಆರ್ಥಿಕ ಪರಿಸ್ಥಿತಿ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಯಾವುದೇ ಕೆಟ್ಟ ಚಟಗಳಿಗೆ ದಾಸರಾಗದೆ ಉತ್ತಮ ಬದುಕು ಕಂಡುಕೊಳ್ಳಬೇಕು. ಜೈಲಿನಿಂದ ಬಿಡುಗಡೆಯಾದ ಪ್ರತಿಯೊಬ್ಬರೂ ಉತ್ತಮ ಪ್ರಜೆಗಳಾಗಿ ಜೀವನ ನಡೆಸಬೇಕು ಎಂದರು. ನಿವೃತ್ತ ಸರ್ಕಾರಿ ಅಭಿಯೋಜಕ ಪಿ.ಕಾಳಿಂಗರಾವ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ಸುಧಾಕರ ಶಾನುಭೋಗ, ವಕೀಲ ಅಟವಾಳಗಿ ಕೊಟ್ರೇಶ, ನಿವೃತ್ತ ಶಿರಸ್ತೇದಾರ್ ತಿಪ್ಪೇಸ್ವಾಮಿ, ಸಹಾಯಕ ಜೈಲರ್ ಬಾಳೇಶ್ ಪೂಜಾರಿ ಇದ್ದರು.