ಶಿಕಾರಿಪುರ: ಬಂಜಾರ ಸಮುದಾಯ ಅತ್ಯಂತ ಪರಿಶ್ರಮಿ ಮತ್ತು ಸ್ವಾಭಿಮಾನಿ. ಸಮಾಜದ ಅಭಿವೃದ್ಧಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಸಾಕಷ್ಟು ಅನುದಾನ ನೀಡಿದ್ದಾರೆ ಎಂದು ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ರೇಣುಕಾ ಹನುಮಂತಪ್ಪ ಹೇಳಿದರು.
ರಾಗಿಕೊಪ್ಪ ತಾಂಡದಲ್ಲಿ ಏರ್ಪಡಿಸಿದ್ದ ಸೇವಾಲಾಲ್ ಸಮುದಾಯ ಭವನದ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು, ಬಂಜಾರ ಸಮಾಜ ವಿಶಿಷ್ಟ ಸಂಸ್ಕೃತಿ, ಪರಂಪರೆ, ಜಾನಪದ ಸೊಗಡನ್ನು ಹೊಂದಿದೆ. ವಿಶಿಷ್ಟವಾದ ಸಂಸ್ಕೃತಿ ಉಳಿಯಬೇಕು. ಭಾಷೆಯ ಅಭಿವೃದ್ಧಿ ಆಗಬೇಕು ಎಂದರು.
ತಾಂಡಾ ಅಭಿವೃದ್ಧಿ ನಿಗಮದ ನಿರ್ದೇಶಕಿ ಸವಿತಾ ಶಿವಕುಮಾರ್ ಮಾತನಾಡಿ, ಬಂಜಾರ ಸಮಾಜ ಆರ್ಥಿಕ, ಸಾಮಾಜಿಕವಾಗಿ ಸದೃಢವಾಗಬೇಕಿದೆ. ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಲು ಗಮನ ನೀಡಬೇಕು. ಯಾವುದೇ ಸಮಾಜ ಸಮರ್ಥವಾಗಲು ಶಿಕ್ಷಣವೇ ಅಡಿಪಾಯ. ಯಾವ ಕಾರಣಕ್ಕೂ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನಿಗಾ ವಹಿಸಬೇಕು ಎಂದು ಸಲಹೆ ನೀಡಿದರು.
ತಾಪಂ ಸದಸ್ಯ ಆರ್.ಕೆ.ಶಂಭು, ತಾಪಂ ಮಾಜಿ ಅಧ್ಯಕ್ಷ ಸಂಕ್ಲಾಪುರ ಹನುಮಂತಪ್ಪ ಇತರರಿದ್ದರು.