ಜಿಲ್ಲೆ

ಅಕ್ರಮವಾಗಿ ಸಂಗ್ರಹಿಸಿದ್ದ ಸಾಗುವಾನಿ ಮರ ವಶ

ಎ. ಆರ್. ರಘುರಾಮ

ಗುಂಡ್ಲುಪೇಟೆ : ತಾಲೂಕಿನ ಅಣ್ಣೂರು ಗ್ರಾಮದ ಜಮೀನಿನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಸಾಗುವಾನಿ ಮರಗಳನ್ನು ಅರಣ್ಯ ಸಂಚಾರಿ ದಳದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗ್ರಾಮದ ಸುನೀಲ್ ಎಂಬುವರಿಗೆ ಸೇರಿದ ಜಮೀನಿನಲ್ಲಿ ಅದೇ ಗ್ರಾಮದ ಮಾದಪ್ಪ ಎಂಬಾತ 10ಕ್ಕೂ ಹೆಚ್ಚಿನ ಸಾಗುವಾನಿ ಮರಗಳನ್ನು ಸಂಗ್ರಹಿಸಿದ್ದ. ಬೇರೆ ಬೇರೆ ಕಡೆಗಳಲ್ಲಿ ಖರೀದಿಸಿದ ಲಕ್ಷಾಂತರ ರೂಪಾಯಿ ಮೌಲ್ಯದ ಮರಗಳನ್ನು ಅರಣ್ಯ ಇಲಾಖೆ ಅನುಮತಿ ಪಡೆಯದೇ ಕತ್ತರಿಸಿ ಅಕ್ರಮವಾಗಿ ಸಂಗ್ರಹಿಸಿದ್ದ. ಅರಣ್ಯ ಸಂಚಾರಿ ದಳದ ಸಬ್‌ಇನ್ಸ್‌ಪೆಕ್ಟರ್ ಯಾಸಿನ್ ಹಾಗೂ ಸಿಬ್ಬಂದಿ ಬಫರ್ ವಲಯಾರಣ್ಯ ಇಲಾಖೆ ಸಹಕಾರದಲ್ಲಿ ಭಾನುವಾರ ದಾಳಿ ನಡೆಸಿ ಮರಗಳನ್ನು ವಶಕ್ಕೆ ಪಡೆದುಕೊಂಡಿದೆ. ಮರಗಳನ್ನು ಸ್ವಂತ ಬಳಕೆಗೆ ಖರೀದಿಸಿದ್ದೆ ಎಂದು ಆರೋಪಿ ಮಾದಪ್ಪ ವಿಚಾರಣೆ ಸಂದರ್ಭ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಬಫರ್ ಜೊನ್ ವಲಯ ಅರಣ್ಯಾಧಿಕಾರಿ ಶಿವಕುಮಾರ್ ತಿಳಿಸಿದ್ದಾರೆ.