ಜಿಲ್ಲೆ

ವಿಶೇಷ ಪೂಜೆ ಸಮರ್ಪಣೆ - ವೈಕುಂಠ ಏಕಾದಶಿಯ ವಿಶೇಷ

  ಗುಂಡ್ಲುಪೇಟೆ : ವೈಕುಂಠ ಏಕಾದಶಿಯ ಅಂಗವಾಗಿ ಶುಕ್ರವಾರ ತಾಲೂಕಿನ ವಿವಿಧ ವೈಷ್ಣವ ದೇವಾಲಯಗಳಲ್ಲಿ ವಿಶೇಷ ಪೂಜೆ ಸಮರ್ಪಣೆಯಾಯಿತು. ನೂರಾರು ಭಕ್ತರು ದೇವಾಲಯಗಳಲ್ಲಿ ನಿರ್ಮಿಸಿದ್ದ ಸ್ವರ್ಗದ ಬಾಗಿಲಿನ ಮೂಲಕ ಸಾಗಿ ಭಕ್ತಿಭಾವ ಮೆರೆದರು. ಪಟ್ಟಣದ ಶ್ರೀ ವಿಜಯನಾರಾಯಣಸ್ವಾಮಿ ದೇವಾಲಯ, ಪುರಾತನ ರಾಮೇಶ್ವರ ದೇವಾಲಯ, ಹಿಮವದ್ ಗೋಪಾಸ್ವಾಮಿ ಸನ್ನಿಧಿ, ಹಂಗಳದ ವರದರಾಜಸ್ವಾಮಿ ದೇವಾಲಯ, ಹುಲಿಗಿನ ಮೊರಡಿ ವೆಂಕಟರಮಣ ದೇಗುಲ, ತಾಲೂಕಿನ ತೆರಕಣಾಂಬಿಯ ಶ್ರೀ ಲಕ್ಷ್ಮೀ ವರದರಾಜಸ್ವಾಮಿ, ಹಂಡೆ ಗೋಪಾಲಸ್ವಾಮಿ ಮತ್ತುಕೋದಂಡ ರಾಮ ದೇವಾಲಯಗಳಲ್ಲಿ ಮೂಲ ಮೂರ್ತಿಗಳಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು.

ಧನುರ್ಮಾಸ ಹಾಗೂ ವೈಕುಂಠ ಏಕಾದಶಿ ಅಂಗವಾಗಿ ಪಟ್ಟಣದ ರಾಮೇಶ್ವರ ದೇವಾಲಯದ ಶಿವಲಿಂಗಕ್ಕೆ ಪ್ರಧಾನ ಅರ್ಚಕ ಶಂಕರನಾರಾಯಣ ಜೋಯಿಸ್ ನೇತೃತ್ವದಲ್ಲಿ ಹರಿಹರನ ಅಲಂಕಾರ ಮಾಡಿದ್ದು ಗಮನ ಸೆಳೆಯಿತು. ತೆರಕಣಾಂಬಿ ಶ್ರೀ ಲಕ್ಷ್ಮೀ ವರದರಾಜಸ್ವಾಮಿ ದೇವಾಲಯದಲ್ಲಿ ಪ್ರಧಾನ ಅರ್ಚಕ ವರದರಾಜು ನೇತೃತ್ವದಲ್ಲಿ ದೇವರಿಗೆ ವಿಶೇಷ ಪುಷ್ಪಾಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ನಸುಕಿನಲ್ಲೇ ಮಿಂದು, ಮಡಿಯುಟ್ಟು ಸನ್ನಿಧಿಗಳಿಗೆ ಆಗಮಿಸಿದ್ದ ನೂರಾರು ಭಕ್ತರು ದರ್ಶನ ಪಡೆದು, ಪ್ರಸಾದ ಸ್ವೀಕರಿಸಿ ಧನ್ಯತೆ ಮೆರೆದರು.