ತೆರಕಣಾಂಬಿ ಬಸ್ ನಿಲ್ದಾಣದಲ್ಲಿ ಮಾನವೀಯ ಸೇವೆ
ಗುಂಡ್ಲುಪೇಟೆ : ತಾಲೂಕಿನ ತೆರಕಣಾಂಬಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಬಿಟ್ಟುಹೋಗಿದ್ದ ಬ್ಯಾಗನ್ನು ಸುರಕ್ಷಿತವಾಗಿ ತಲುಪಿಸುವ ಮೂಲಕ ಕೆಎಸ್
ಆರ್‌ಟಿಸಿ ನೌಕರ ಪ್ರಾಮಾಣಿಕತೆ ತೋರಿದ್ದಾರೆ.
ಬುಧವಾರ ಚಾಮರಾಜನಗರ ತಾಲೂಕಿನ ಮಂಗಲ ಹೊಸೂರು ಗ್ರಾಮದ ಶಿವಮ್ಮ ಅವರು ಅಗತ್ಯವಸ್ತುಗಳಿದ್ದ ಬ್ಯಾಗನ್ನು ತಾಲೂಕಿನ ತೆರಕಣಾಂಬಿ ಬಸ್ ನಿಲ್ದಾಣದಲ್ಲಿ ಬಿಟ್ಟುಹೋಗಿದ್ದರು. ಅನಾಥವಾಗಿ ಬಿದ್ದಿದ್ದ ಬ್ಯಾಗನ್ನು ಇಲ್ಲಿದ್ದ ಟ್ರಾಫಿಕ್ ಕಂಟ್ರೋಲರ್ ಎಸ್.ವಿಠಲ ಪರಿಶೀಲಿಸಿದರು. ಆಧಾರ್ ಕಾರ್ಡ್‌ನಲ್ಲಿ ನಮೂದಾಗಿದ್ದ ಮೊಬೈಲ್ ನಂಬರಿಗೆ ಕರೆಮಾಡಿ ಮಾಹಿತಿ ನೀಡಿದರು. ಸ್ವಲ್ಪ ಸಮಯದಲ್ಲೇ ಆಗಮಿಸಿದ ವಾರಸುದಾರರಿಗೆ ಬ್ಯಾಗ್ ಮರಳಿಸಿದರು.
ಪರಿಸರ ಹಾಗೂ ಜನಸ್ನೇಹಿ ಬಸ್ ನಿಲ್ದಾಣ: ಕಳೆದ ಐದಾರು ವರ್ಷಗಳಿಂದ ನಿಲ್ದಾಣದಲ್ಲಿ ಟ್ರಾಫಿಕ್ ಕಂಟ್ರೋಲರ್ ಆಗಿ ಸೇವೆ ಸಲ್ಲಿಸುತ್ತಿತುವ ವಿಠಲ ಅವರು ಸಂಘ ಸಂಸ್ಥೆಗಳು ಹಾಗೂ ಪರಿಸರಾಸಕ್ತರ ನೆರವಿನಿಂದ ಬಸ್ ನಿಲ್ದಾಣ ಆವರಣದಲ್ಲಿ 40 ಕ್ಕೂ ಹೆಚ್ಚಿನ ಹೊಂಗೆ ಸಸಿ ನೆಟ್ಟು ಪ್ರತಿ ದಿನ ತಾವೇ ನೀರುಣಿಸಿ ಬೆಳೆಸುತ್ತಿದ್ದಾರೆ. ಸದ್ಯ ಎಲ್ಲ ಗಿಡಗಳೂ ಎತ್ತರವಾಗಿ ಬೆಳೆದು ಪ್ರಯಾಣಿಕರಿಗೆ ನೆರಳು ನೀಡುತ್ತಿವೆ. ಬೇಸಿಗೆ ಸಂದರ್ಭದಲ್ಲಿಯೂ ಇಡೀ ನಿಲ್ದಾಣದಲ್ಲಿ ತಂಪಿನ ವಾತಾವರಣವಿರುತ್ತದೆ.
ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ವಯೋವೃದ್ಧರಿಗೆ ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ವಿಠಲ
ಜನಪ್ರಿಯ ನೌಕರರಾಗಿದ್ದಾರೆ. ಪ್ರಯಾಣಿಕರು ಬಸ್ಸಿನಲ್ಲಿ ಬಿಟ್ಟುಹೋದ ಮೊಬೈಲ್ ಫೋನ್, ಪರ್ಸ್, ಕಂದಾಯ ದಾಖಲೆಗಳು ಮುಂತಾದ ವಸ್ತುಗಳನ್ನು ಮಾಲೀಕರಿಗೆ ಮತ್ತೆ ತಲುಪಿಸುವ ನಿಟ್ಟಿನಲ್ಲಿ ಸೇವಾಮನೋಭಾವ ತೋರಿದ್ದಾರೆ. ಇದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.