ತಹಸೀಲ್ದಾರ್ ಎಂ.ಎಸ್.ತನ್ಮಯಿ ಸಲಹೆ
ಗುಂಡ್ಲುಪೇಟೆ : ಪ್ರತಿಯೊಬ್ಬರಿಗೂ ಕಣ್ಣು ಪ್ರಮುಖವಾದ ಅಂಗ. ಕಣ್ಣಿನ ಆರೋಗ್ಯಕ್ಕೆ ಮಹತ್ವ ನೀಡಬೇಕು ಎಂದು ತಹಸೀಲ್ದಾರ್ ಎಂ.ಎಸ್.ತನ್ಮಯಿ ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಭವನದ ಆವರಣದಲ್ಲಿ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ವತಿಯಿಂದ ಶನಿವಾರ ಆಯೋಜಿಸಿದ್ದ ಕಣ್ಣಿನ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಕಣ್ಣಿನ ಚಿಕಿತ್ಸೆ ದುಬಾರಿಯಾಗುತ್ತಿದೆ. ಸ್ವಯಂಸೇವಾ ಸಂಸ್ಥೆಗಳು ಶಿಬಿರಗಳನ್ನು ಆಯೋಜಿಸುವ ಮೂಲಕ ಉತ್ತಮ ಕಾರ್ಯ ಮಾಡುತ್ತಿವೆ. ಇದು ಇನ್ನೂ ಹೆಚ್ಚಿನ ಜನರಿಗೆ ತಲುಪಿಸುವಂತಾಗಬೇಕು. ಸಾರ್ವಜನಿಕರು ಇಂಥಾ ಶಿಬಿರಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಅರವಿಂದ ಕಣ್ಣಾಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ವಿಜಯಕಾಂತ್ ಮಾತನಾಡಿ, ಸಕ್ಕರೆ ಕಾಯಿಲೆ ಯು ಕಣ್ಣಿನ ದೃಷ್ಟಿಯ ಮೇಲೆ ತುಂಬಾ ಪರಿಣಾಮ ಬೀರುತ್ತಿದ್ದು ಡಯಾಬಿಟಿಕ್ ರೆಟಿನೋಪತಿಯಿಂದ ಕಣ್ಣಿನ ನರಗಳು ದುರ್ಬಲವಾಗುತ್ತವೆ. 40 ವರ್ಷ ಮೇಲ್ಪಟ್ಟ ಎಲ್ಲರೂ ಕನಿಷ್ಠ ವರ್ಷಕ್ಕೊಮ್ಮೆಯಾದರೂ ಕಣ್ಣಿನ ಆರೋಗ್ಯ ತಪಾಸಣೆಗೆ ಒಳಗಾಗಬೇಕು. ಈ ಶಿಬಿರಗಳಲ್ಲಿ ತಪಾಸಣೆ ನಡೆಸಿ ಉಚಿತವಾಗಿ ಕ್ಯಾಟರಾಕ್ಟ್ ಶಸ್ತ್ರ ಶಸ್ತ್ರಚಿಕಿತ್ಸೆ ಮಾಡಿ ಐಒಎಲ್ ಲೆನ್ಸ್ ಅಳವಡಿಸಿ ದೃಷ್ಟಿ ಉಳಿಸುವಂತೆ ಮಾಡಲಾಗುತ್ತಿದೆ ಎಂದರು.