-ಖೊಟ್ಟಿ ದಾಖಲೆ ಹೆಸರಿನಲ್ಲಿ ಆಸ್ತಿ ವರ್ಗಾವಣೆ ಆರೋಪ
ಗೋಕಾಕ :ತಾಲೂಕಿನ ಶಿಂಧಿಕುರಬೇಟ ಗ್ರಾಮದಲ್ಲಿ ಖೊಟ್ಟಿ ದಾಖಲೆಗಳ ಆಧಾರದ ಮೇಲೆ ಆಸ್ತಿ ಅಕ್ರಮವಾಗಿ ವರ್ಗಾವಣೆ ಮಾಡಿರುವ ಆರೋಪದ ಮೇಲೆ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಸೇರಿ 28 ಸದಸ್ಯರ ಸದಸ್ಯತ್ವ ರದ್ದುಗೊಳಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ಆದೇಶ ಹೊರಡಿಸಿದ್ದಾರೆ.
ಶಿಂಧಿಕುರಬೇಟ ಗ್ರಾಪಂನಲ್ಲಿ 2022 ಫ್ರಬವರಿ 25 ಮತ್ತು ಮಾರ್ಚ್ 25ರಂದು ಜರುಗಿದು ಸಾಮಾನ್ಯ ಸಭೆಯಲ್ಲಿ ಗ್ರಾಮದ ಸರ್ವೆ ನಂ.661ರಕ್ಕೆ ಸಂಬಂಧಿಸಿದಂತೆ ಖೊಟ್ಟಿ ದಾಖಲೆಗಳನ್ನು ಪರಿಶೀಲನೆ ನಡೆಸದೆ ಶಾಂತಾ ನಾಗಪ್ಪ ಪೋತದಾರ ಹೆಸರಿನಲ್ಲಿರುವ ಆಸ್ತಿಯನ್ನು ರಾಮಚಂದ್ರ ದಾನಪ್ಪ ಪೋತದಾರ ಹೆಸರಿಗೆ ನಿಯಮಬಾಹಿರವಾಗಿ ಆಸ್ತಿ ವರ್ಗಾವಣೆ ಮಾಡಿರುವುದು ಸಾಬೀತಾಗಿರುವ ಹಿನ್ನೆಲೆ ಗ್ರಾಪಂ ಎಲ್ಲ ಸದಸ್ಯರ ಸದಸ್ಯತ್ವ ರದ್ದುಗೊಂಡಿದೆ.
ಕರ್ನಾಟಕ ರಾಜ್ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ 48 (4) ಮತ್ತು 48 (5) ಅಡಿಯಲ್ಲಿ ಗ್ರಾಪಂ ಅಧ್ಯಕ್ಷ ರೇಣುಕಾ ಪಾಟೀಲ, ಉಪಾಧ್ಯಕ್ಷ ಭೀಮಪ್ಪಾ ಬರನಾಳಿ, ಸದಸ್ಯರಾದ ಫಕೀರಪ್ಪಾ ಭೋವಿ, ಗಜಾನನ ಪಾಟೀಲ, ಶಾಂತವ್ವ ಕೌಜಲಗಿ, ಮಾರುತಿ ಜಾಧವ, ಅಮೃತ ಕಳ್ಯಾಗೋಳ, ರುಕ್ಸಾರ ಜಮಾದಾರ, ರೂಪಾ ಕಂಬಾರ, ಶಾಂತವ್ವ ಬೋವಿ, ಸುರೇಖಾ ಪತ್ತಾರ,ಇಬ್ರಾಹೀಂ ಮುಲ್ಲಾ, ಚಾಂದವಿ ಸೌದಾಗರ, ರಾಮಪ್ಪಾ ಬೆಳಗಲಿ, ಶಮಶಾದ ಸೌದಾಗರ, ಮಂಜುಳಾ ಕರೋಶಿ, ಮಂಜುನಾಥ ಗುಡಕ್ಷೇತ್ರ, ರಾಮಕೃಷ್ಣಾ ಗಾಡಿವಡ್ಡರ್, ಸುಮಿತ್ರಾ ಮಾಯಣ್ಣಿ, ಪಾರ್ವತಿ ಜೋತೆನ್ನವರ, ಅಡಿವೆಪ್ಪಾ ಬೆಕ್ಕಿನವರ, ಸಿದ್ದಪ್ಪಾ ಕಟ್ಟಿಕಾರ, ಬಸಲಿಂಗವ್ವಾ ಭಜಂತ್ರಿ, ಲಕ್ಷ್ಮೀಬಾಯಿ ಸೂರ್ಯವಂಶಿ, ನಿಸ್ಸಾರಹ್ಮದ್ ಜಕಾತಿ, ಅಶೋಕ ಮೇತ್ರಿ, ಸುರೇಖಾ ಗಾಡಿವಡ್ಡರ್, ಶ್ರೀಕಾಂತ ಕಳ್ಯಾಗೋಳ ಇವರನ್ನು ಮುಂದಿನ 6 ವರ್ಷಗಳ ಕಾಲ ಚುನಾವಣೆಗೆ ನಿಲ್ಲದಂತೆ ಅನರ್ಹಗೊಳಿಸಿ ಆದೇಶ ಹೊರಡಿಸಿದ್ದಾರೆ.