ಜಿಲ್ಲೆ

ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಜಿಪಂ ಸಿಇಒ

ಮೈಸೂರು: ಮ-ನರೇಗಾ ಯೋಜನೆಯಡಿಯಲ್ಲಿ ಕಡಿಮೆ ಮಾನವ ದಿನಗಳು ಇರುವ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚು ಮಾನವ ದಿನಗಳನ್ನು ಸಾಧಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯತ್ರಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಕಚೇರಿಯ ಮಿನಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ತಾಲೂಕು ಕಾರ್ಯನಿರ್ವಹಣಾಧಿಕಾರಿಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳ ಪ್ರಗತಿ, ಶಿಶುಪಾಲನಾ ಕೇಂದ್ರ ಪ್ರಗತಿ, ಎನ್‌ಎಮ್‌ಎಮ್‌ಎಸ್ ಪ್ರಗತಿ, ಸಾಮಾಜಿಕ ಪರಿಶೋಧನೆ ಪ್ರಗತಿ, ಸ್ವ ಸಹಾಯ ಸಂಘಗಳ ವರ್ಕ್ ಶೆಡ್ ಹಾಗೂ ಸ್ವಚ್ಛ ಭಾರತ್ ಅಭಿಯಾನ, ವೈಯಕ್ತಿಕ ಶೌಚಗೃಹ, ಸಮುದಾಯ ಶೌಚಗೃಹಗಳ ಕುರಿತು ಚರ್ಚಿಸಿದರು.
ಜಲಜೀವನ್ ಮಿಷನ್ ಕುಡಿಯುವ ನೀರು ಯೋಜನೆಯಡಿ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ, ತುರ್ತು ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಸೇರಿದಂತೆ ಇತರ ವಿಷಯಗಳ ಕುರಿತು ಪ್ರಗತಿ ಪರಿಶೀಲಿಸಲಾಯಿತು.
ಪಿಆರ್ ಇಡಿ ಪ್ರಗತಿ, ತೆರಿಗೆ ಪರಿಷ್ಕರಣೆ, ತೆರಿಗೆ ವಸೂಲಾತಿ, ಡಿಜಿಟಲ್ ಗ್ರಂಥಾಲಯ, ಸಕಾಲ ಯೋಜನೆ, ಸರ್ಕಾರಿ ಸಿಬ್ಬಂದಿ, ಗ್ರಾ.ಪಂ ಇ-ಹಾಜರಾತಿ ಪ್ರಗತಿ, ಆಸ್ತಿ ಸಮೀಕ್ಷೆ ಹಾಗೂ 14 ಮತ್ತು 15ನೇ ಹಣಕಾಸಿನ ಪ್ರಗತಿ ಕುರಿತು ಚರ್ಚಿಸಲಾಯಿತು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ(ಆಡಳಿತ) ಸವಿತಾ, ಮುಖ್ಯ ಲೆಕ್ಕಾಧಿಕಾರಿ ಸಿದ್ದಗಂಗಮ್ಮ, ಎಲ್ಲ ತಾಲೂಕಿನ ಕಾರ್ಯನಿರ್ವಹಣಾಧಿಕಾರಿಗಳು, ಅನುಷ್ಠಾನ ಇಲಾಖೆಯ ಅಧಿಕಾರಿಗಳು, ಸಹಾಯಕ ನಿರ್ದೇಶಕರು (ಗ್ರಾ.ಉ) ಇತರರು ಇದ್ದರು.