ಕೋಲಾರ: ಕೋಲಾರದ ಜಿಪಂನಲ್ಲಿ 6 ತಿಂಗಳಿಂದ ಮುಖ್ಯಕಾರ್ಯನಿರ್ವಹಣಾಧಿಕಾರಿ ಹುದ್ದೆ ಖಾಲಿ ಇದ್ದು, ಅಭಿವೃದ್ಧಿ ಕಾರ್ಯಕ್ಕೆ ಹಿನ್ನಡೆಯಾಗಿದೆ.
ಲೋಕಸಭಾ ಚುನಾವಣೆ ನಂತರ 1 ತಿಂಗಳ ಕಾಲ ಅನಾರೋಗ್ಯದ ಮೇಲೆ ರಜೆ ಮೇಲೆ ತೆರಳಿದ್ದ ಜಿಪಂ ಸಿಇಒ ಪದ್ಮಾ ಬಸವಂತಪ್ಪ ನಂತರ ವರ್ಗಾವಣೆ ಮಾಡಿಸಿಕೊಂಡರು. ವರ್ಗಾವಣೆಯಾಗಿ 6 ತಿಂಗಳು ಕಳೆದರೂ ಸರ್ಕಾರ ಜಿಪಂಗೆ ಸಿಇಒ ಸ್ಥಾನ ತುಂಬಲು ಸಾಧ್ಯವಾಗಿಲ್ಲ. ಇದರ ನಡುವೆ, ಕೋಲಾರ ಜಿಪಂಗೆ ಯಾವುದೇ ಒಬ್ಬ ಅಧಿಕಾರಿ ಬಂದರೂ 2 ವರ್ಷಕ್ಕಿಂತಲೂ ಮೇಲ್ಪಟ್ಟು ಅಧಿಕಾರದಲ್ಲಿ ಮುಂದುವರಿಯುತ್ತಿಲ್ಲ ಎಂಬ ಆರೋಪವೂ ಇದ್ದು, ಈ ಕಾರಣದಿಂದಾಗಿಯೇ ನೂತನವಾಗಿ ಸಿಇಒ ಆಗಿ ಬರಲು ಅಧಿಕಾರಿಗಳು ಹಿಂಜರಿಯುತ್ತಿದ್ದಾರೆ ಎಂಬ ಮಾತುಗಳೂ ಇವೆ.
ಕೋಲಾರ ಜಿಲ್ಲೆ ಹೋರಾಟಗಳ, ಧರಣಿಗಳ ತವರು ಎಂದೇ ಹೆಸರು ಪಡೆದಿದೆ. ಜತೆಗೆ ರಾಜಕಾರಣವು ಸೇರಿಕೊಂಡಿರುವುದರಿಂದ ಜಿಲ್ಲಾ ಪಂಚಾಯಿತಿಗೆ ಅಧಿಕಾರಿಗಳು ಬರಲು ಹಿಂದೇಟು ಹಾಕುತ್ತಿದ್ದಾರೆ. ಗ್ರಾಮ ಪಂಚಾಯಿತಿಯ ಜಲಗಾರ ಮತ್ತು ಕರ ವಸೂಲಿಗಾರ ಸೇರಿ ಅಭಿವೃದ್ಧಿ ಅಧಿಕಾರಿ ಮತ್ತು ತಾಲೂಕು ಪಂಚಾಯಿತಿ ಅಧಿಕಾರಿಗಳ ವರ್ಗಾವಣೆ ವಿಷಯದಲ್ಲಿ ರಾಜಕಾರಣ ತಳುಕು ಹಾಕುತ್ತಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.
ಪದ್ಮಾ ಬಸವಂತಪ್ಪ ವರ್ಗಾವಣೆಯಾದ ನಂತರ ಸರ್ಕಾರ ಹೊಸದಾಗಿ ಕೋಲಾರಕ್ಕೆ ಭುವನೇಶ್ವರ ಪಾಟೀಲ್ ಎಂಬ ಅಧಿಕಾರಿಯೊಬ್ಬರನ್ನು ವರ್ಗಾವಣೆ ಮಾಡಿತು. ಆದರೆ ಅವರು ಕೋಲಾರಕ್ಕೆ ಬರದೆ ಬೇರೊಂದು ಕಡೆ ವರ್ಗಾವಣೆ ಮಾಡಿಸಿಕೊಂಡರು. ಸಿಇಒ ಹುದ್ದೆ ಖಾಲಿ ಇದ್ದರೂ ಜಿಲ್ಲಾ ಉಸ್ತುವಾರಿ ಸಚಿವರಾಗಲೀ, ಶಾಸಕರಾಗಲಿ ಈ ಬಗ್ಗೆ ಗಮನ ಹರಿಸುತ್ತಿಲ್ಲ. ಜಿಲ್ಲಾ ಪಂಚಾಯಿತಿಗೆ ಆಡಳಿತ ಮಂಡಳಿ ಇಲ್ಲ. ಜತೆಗೆ ಅನುದಾನ ಕಡಿಮೆ ಬರುತ್ತಿರುವುದರಿಂದ ಶಾಸಕರಿಗೂ ಇತ್ತ ಕಾಳಜಿ ಇಲ್ಲದಂತಾಗಿದೆ ಎನ್ನಲಾಗುತ್ತಿದೆ.
ಡಿಸಿ ನಿರ್ವಹಣೆ
ಆರು ತಿಂಗಳಿನಿಂದ ಜಿಲ್ಲಾಧಿಕಾರಿಯೇ ಜಿಲ್ಲಾ ಪಂಚಾಯಿತಿ ಪ್ರಭಾರ ಸಿಇಒಆಗಿ ಕಾರ್ಯ ನಿರ್ವಹಿಸುತ್ತಿದ್ದು, ಉಪ ಕಾರ್ಯದರ್ಶಿ ಬಿ.ಶಿವಕುಮಾರ್ ಜಿಪಂ ಉಸ್ತುವಾರಿಯಲ್ಲಿ ನರೇಗಾ ಸೇರಿ ಕಂದಾಯ ವಸೂಲಿ ಮುಂತಾದ ಕಾರ್ಯಗಳಿಗೆ ವೇಗ ನೀಡಿದ್ದಾರೆ. ಜಿಪಂನಲ್ಲಿ ಆಡಳಿತ ಮಂಡಳಿ ಇದ್ದಿದ್ದರೆ ಜನಪ್ರತಿನಿಧಿಗಳು ಸಿಇಒ ಕುರ್ಚಿ ಖಾಲಿ ಇರಲು ಬಿಡುತ್ತಿರಲಿಲ್ಲ. ಜಿಲ್ಲಾ ಪಂಚಾಯಿತಿ ಆಡಳಿತ ಮಂಡಳಿಗೆ ಚುನಾವಣೆ ನಡೆಯದೇ ಇರುವುದರಿಂದ ಇತ್ತ ಕಡೆ ಜನಪ್ರತಿನಿಧಿಗಳ ಓಡಾಟವೂ ಣಿಸಿದೆ.
ಜಾತಿ ಲೆಕ್ಕಾಚಾರ
ಒಕ್ಕಲಿಗ ಸಮುದಾಯದ ಅಧಿಕಾರಿಯನ್ನು ಕೋಲಾರಕ್ಕೆ ಸಿಇಒ ಆಗಿ ನೇಮಕ ಮಾಡಬೇಕೆಂದು ಈಗಾಗಲೇ ಸರ್ಕಾರ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಜಿಲ್ಲೆಯ ಶಾಸಕರೂ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
"ಆರು ತಿಂಗಳಿನಿಂದ ಸಿಇಒ ಇಲ್ಲದಿದ್ದರೂ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಪಂಚಾಯಿತಿ ಕಾರ್ಯಚಟುವಟಿಕೆಗಳು ನಡೆಯುತ್ತಿವೆ. ಯಾವುದೇ ಕೆಲಸ ಕಾರ್ಯಗಳು ಕುಂಠಿತವಾಗಿಲ್ಲ. ಸಿಇಒ ಇದ್ದರೆ ಕಾರ್ಯಚಟುವಟಿಕೆಗಳು ಮತ್ತಷ್ಟು ವೇಗ ಪಡೆದುಕೊಳ್ಳುತ್ತವೆ."
-ಬಿ.ಶಿವಕುಮಾರ್, ಉಪಕಾರ್ಯದರ್ಶಿ, ಜಿಪಂ, ಕೋಲಾರ
"ಜಿಲ್ಲಾ ಪಂಚಾಯಿತಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸುವ ಅಧಿಕಾರಿ ಇಲ್ಲದಂತಾಗಿದೆ. ಗ್ರಾಮ ಪಂಚಾಯಿತಿಗಳು ಉತ್ತಮವಾಗಿ ಕಾರ್ಯನಿರ್ವಹಿಸಬೇಕಾದರೆ ಜಿಲ್ಲಾ ಪಂಚಾಯಿತಿ ಮುಖ್ಯಸ್ಥರೂ ಕಾರಣ. ಮುಖ್ಯಸ್ಥರೇ ಇಲ್ಲದಿದ್ದರೆ ವ್ಯವಸ್ಥೆಗಳು ಹಾಳಾಗುತ್ತವೆ. ಕುಂದುಕೊರತೆಗಳ ಸಮಸ್ಯೆಗಳು ಹೆಚ್ಚಾಗುತ್ತವೆ. ಅಧಿಕಾರಿಯನ್ನು ತುಂಬುವ ಕೆಲಸ ಸರ್ಕಾರ ಮಾಡಬೇಕಾಗಿದೆ."
-ಪಿ.ಆರ್.ಸೂರ್ಯನಾರಾಯಣ, ರಾಜ್ಯ ಪ್ರಾಂತ ರೈತ ಸಂಘದ ಉಪಾಧ್ಯಕ್ಷ