ಚಿಕ್ಕಮಗಳೂರು: ತಾಲೂಕಿನ 13 ಗ್ರಾಪಂಗಳ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, 8 ಗ್ರಾಪಂಗಳಲ್ಲಿ ಕಾಂಗ್ರೆಸ್ ಬೆಂಬಲಿತರು, 4ರಲ್ಲಿ ಬಿಜೆಪಿ ಬೆಂಬಲಿತರು ಗೆದ್ದಿದ್ದಾರೆ. ಶಿರವಾಸೆ ಗ್ರಾಪಂನಲ್ಲಿ ಯಾವ ಪಕ್ಷದ ಬೆಂಬಲಿತರೂ ಹೆಚ್ಚು ಸ್ಥಾನ ಗೆಲ್ಲದಿದ್ದರಿಂದ ಜೆಡಿಎಸ್ ಮತ್ತು ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಇನಾಂ ದತ್ತಾತ್ರೇಯ ಪೀಠ, ಶಿರವಾಸೆ, ಬಿದರೆ, ಕಡವಂತಿ, ದೇವದಾನ, ಕಳಸಾಪುರ, ಬೆಳವಾಡಿ, ಹುಯಿಗೆರೆ, ಈಶ್ವರಹಳ್ಳಿ, ಬಸರವಳ್ಳಿ, ಮಾಚೇನಹಳ್ಳಿ, ಕೆ.ಬಿ.ಹಾಳ್, ಸಿಂದಿಗೆರೆ ಸೇರಿ 13 ಗ್ರಾಪಂಗಳಲ್ಲಿ 10 ಮಂದಿ ಅವಿರೋಧ ಸೇರಿ 123 ಮಂದಿ ಆಯ್ಕೆಯಾದರು.
ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲು:
ಬೆಳವಾಡಿ ಗ್ರಾಪಂನ 13 ಸದಸ್ಯ ಬಲದಲ್ಲಿ 5 ಸ್ಥಾನ ಕಾಂಗ್ರೆಸ್ ಬೆಂಬಲಿತರು, 7 ಮಂದಿ ಬಿಜೆಪಿ ಬೆಂಬಲಿತರು, ಓರ್ವ ಯಾವ ಪಕ್ಷದಲ್ಲೂ ಗುರುತಿಸಿಕೊಳ್ಳದ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಗ್ರಾಪಂನಲ್ಲಿ ಅಧ್ಯಕ್ಷ ಸ್ಥಾನ ಬಿಸಿಎಂ ಬಿ.ಗೆ ಮೀಸಲಾಗಿದ್ದು ಬಿಜೆಪಿಯಲ್ಲಿ ಆ ಮೀಸಲು ಅಭ್ಯರ್ಥಿ ಯಾರೂ ಇಲ್ಲದಿರುವುದರಿಂದ ಕಾಂಗ್ರೆಸ್ ಬೆಂಬಲಿತರಿಗೆ ಒಲಿಯುವುದು ನಿಶ್ಚಿತವಾಗಿದೆ. ಭಕ್ತರಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಫಲಿತಾಂಶದಲ್ಲಿ ಒಂದು ಮತ್ತು ಎರಡು ಮತಗಳ ಅಂತರದಲ್ಲಿ ಬಿಜೆಪಿ ಜಯ ಗಳಿಸಿದ ಹಿನ್ನೆಲೆ ಕಾಂಗ್ರೆಸ್ ಬೆಂಬಲಿತರ ಮನವಿ ಮೇರೆಗೆ ಮರು ಎಣಿಕೆ ಮಾಡಲಾಯಿತಾದರೂ ಅದೇ ಫಲಿತಾಂಶ ಹೊರ ಬಂತು. ಸಮಾಧಾನಗೊಳ್ಳದ ಅವರು ಎಸ್ಸಿ ಕ್ಷೇತ್ರದ್ದು ಮತ್ತೊಮ್ಮೆ ಎಣಿಕೆ ಮಾಡಿ ಎಂದಾಗ ಅಧಿಕಾರಿಗಳು ನಿರಾಕರಿಸಿದರು. ಎರಡೂ ಪಕ್ಷದ ಮುಖಂಡರ ನಡುವೆ ವಾಗ್ವಾದ ನಡೆಯಿತು.
ಕೋರ್ಟ್ ಮೊರೆ ಹೋಗಬೇಕಾಗುತ್ತದೆ:
ಕಾಂಗ್ರೆಸ್ ಬೆಂಬಲಿಗ ಕೃಷ್ಣಮೂರ್ತಿ ಮಾತನಾಡಿ, ಒಂದು ಬ್ಯಾಲೆಟ್‍ನಲ್ಲಿ ನನ್ನ ಪತ್ನಿ ಸುಶೀಲಾ ಅವರ ಚಿನ್ಹೆಗೂ ಇಂಕು ತಾಗಿತ್ತು. ಆದರೆ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಅದನ್ನು ಪರಿಗಣಿಸಿದರೆ ಎರಡು ಅಭ್ಯರ್ಥಿಗಳ ಮತ ಸಮನಾಗುತ್ತದೆ. ಆ ಮತ ಪತ್ರವನ್ನು ಮೇಲಾಧಿಕಾರಿಗಳು ಪರಿಶೀಲಿಸಬೇಕು. ಇಲ್ಲದಿದ್ದರೆ ಚುನಾವಣಾ ಆಯೋಗ ಮತ್ತು ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದರು. ತಹಸೀಲ್ದಾರ್ ಡಾ. ಕಾಂತರಾಜ್ ಮಾತನಾಡಿ, ಬೆಳವಾಡಿ ಗ್ರಾಪಂನ ಭಕ್ತರಹಳ್ಳಿ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಧನುಕುಮಾರ್ ಗೆ 316 ಹಾಗೂ ಕಾಂಗ್ರೆಸ್ ಬೆಂಬಲಿತ ಜಗದೀಶ್ 314 ಮತ ಪಡೆದು ಧನುಕುಮಾರ್ ಜಯ ಗಳಿಸಿದ್ದಾರೆ. ಎಸ್ಸಿ ಮೀಸಲು ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ರೇಣುಕಾ 298, ಸುಶೀಲಾ ಕೃಷ್ಣಮೂರ್ತಿ 297 ಮತ ಪಡೆದಿದ್ದರು. ಒಂದು ಮತ ಪತ್ರದಲ್ಲಿ ಒಂದು ಮತ ಚಲಾವಣೆಯಾಗಿತ್ತು. ಮತ್ತೊಬ್ಬರಿಗೆ ಇಂಕು ಬಿದ್ದಿರುವ ರೀತಿ ಕಂಡು ಬಂತು. ನಿಗದಿಪಡಿಸಿದ ಮುದ್ರೆ ಬಿದ್ದಿಲ್ಲ. ಆರ್‍ಒ ಅವರ ನಿರ್ಧಾರದ ಪ್ರಕಾರ ಒಂದೇ ಮತ ಬಿದ್ದಿದೆ ಎಂದು ಪರಿಗಣಿಸಲಾಗಿ ರೇಣುಕಾ ಜಯ ಗಳಿಸಿದ್ದಾರೆ. ಎಂದರು.
ಲಾಟರಿಯಲ್ಲಿ ಒಲಿದ ಅದೃಷ್ಟ:
ಶಿರವಾಸೆ ಸುಗುಡವಾನೆ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗಣೇಶ್ ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುರೇಶ್ ಅವರಿಗೆ ತಲಾ 106 ಮತಗಳು ಲಭಿಸಿದವು. ತಹಸೀಲ್ದಾರ್ ಡಾ.ಕಾಂತರಾಜ್ ಸಮ್ಮುಖದಲ್ಲಿ ಎರಡೂ ಅಭ್ಯರ್ಥಿಗಳ ಹೆಸರನ್ನು ಹಾಕಿ ಲಾಟರಿ ಎತ್ತಿದಾಗ ಗಣೇಶ ಅವರಿಗೆ ಅದೃಷ್ಟ ಒಲಿಯಿತು. ಲಾಟರಿ ಎತ್ತುವ ಸಂದರ್ಭ ಇಬ್ಬರೂ ಕಣ್ಮುಚ್ಚಿ ಕೈಮುಗಿದು ದೇವರಲ್ಲಿ ಪ್ರಾರ್ಥಿಸಿದರು. ನಂತರ ಅವರವರ ಬೆಂಬಲಿಗರು ಪರಸ್ಪರ ಅಭಿನಂದಿಸಿದರೆ, ನಿರಾಸೆಯಾದವರಿಗೆ ಸಮಾಧಾನಪಡಿಸಿದರು.
ಒಂದೂ ಮತ ಪಡೆಯದ ಅಭ್ಯರ್ಥಿ:
ಇನಾಂ ದತ್ತಾತ್ರೇಯ ಪೀಠ ಗ್ರಾಪಂನ ಅತ್ತಿಗುಂಡಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಭ್ಯರ್ಥಿ ಶಾಂತಕುಮಾರ್ ಅವರು ಒಂದೂ ಮತ ಪಡೆದಿಲ್ಲ. ಅವರು ಹಾಗೂ ಅವರ ಕುಟುಂಬದ ಮತಗಳೆಲ್ಲ ಬೇರೆ ಕ್ಷೇತ್ರದಲ್ಲಿತ್ತು. 18 ಟೇಬಲ್‍ಗಳಲ್ಲಿ 54 ಸಿಬ್ಬಂದಿ ಸೇರಿ 80ಕ್ಕೂ ಹೆಚ್ಚು ಅಧಿಕಾರಿ, ಸಿಬ್ಬಂದಿ ಮತ ಎಣಿಕೆಯಲ್ಲಿ ಪಾಲ್ಗೊಂಡಿದ್ದರು. ಕೆಲವೊಂದು ಮತ ಪತ್ರದಲ್ಲಿ ನಿಗದಿಗಿಂತ ಹೆಚ್ಚು ಮತದಾನ ಮಾಡಿದ್ದರೆ ಮತ್ತೆ ಕೆಲವೆಡೆ ಮತದಾನ ಮಾಡದೆ ಖಾಲಿ ಬಿಟ್ಟಿದ್ದರು. ಕೆಲವರು ಪೆನ್ನಿನಲ್ಲಿ ಗುರುತು ಮಾಡಿದ್ದಾರೆ. ಹೀಗೆ ಪ್ರತಿ ಟೇಬಲ್‍ನಲ್ಲೂ 3ರಿಂದ 5 ಮತಗಳು ಅಮಾನ್ಯವಾಗಿವೆ.