ಜಿಲ್ಲೆ

ಗ್ರಾಪಂಗೆ ಬೀಗ ಜಡಿದು ಪ್ರತಿಭಟನೆ

Haveri

ಸವಣೂರ: ನಿರಂತರ ಮಳೆಯಿಂದ ಬಿದ್ದ ಮನೆ ಗುರುತಿಸುವಲ್ಲಿ ಹಾಗೂ ಪರಿಹಾರ ವಿತರಣೆಯಲ್ಲಿ ಅಧಿಕಾರಿಗಳು ಗೊಂದಲ ಸೃಷ್ಟಿಸಿದ್ದಾರೆ. ಹೀಗಾಗಿ ಬಿದ್ದ ಮನೆಗಳ ಸರ್ವೆ ಕಾರ್ಯಗಳ ಮರು ಪರಿಶೀಲನೆ ಕೈಗೊಳ್ಳಬೇಕು ಎಂದು ತಾಲೂಕಿನ ಶಿರಬಡಗಿ ತಾಂಡಾ ಗ್ರಾಮದ ಕೆಲ ಕುಟುಂಬಸ್ಥರು ಮಂಗಳವಾರ ಶಿರಬಡಗಿ ಗ್ರಾಪಂಗೆ ಬೀಗ ಜಡಿದು, ಅಲ್ಲಿಯೇ ಅಡುಗೆ ತಯಾರಿಸಿ ಊಟ ಮಾಡಿ ಪ್ರತಿಭಟನೆ ನಡೆಸಿದರು.

2019-20 ಹಾಗೂ 2020-21ನೇ ಸಾಲಿನಲ್ಲಿ ಮಳೆಗೆ ಬಿದ್ದ ಮನೆಗಳಿಗೆ ಸರ್ಕಾರ ಪರಿಹಾರ ನೀಡಲು ಕೈಗೊಂಡ ಸಮೀಕ್ಷೆ ಅವೈಜ್ಞಾನಿಕವಾಗಿದೆ. ಮನೆ ಬಿದ್ದರೂ ಸಮೀಕ್ಷೆಯಲ್ಲಿ ಕೆಲ ಕುಟುಂಬಗಳನ್ನು ಕೈಬಿಡಲಾಗಿದೆ. ಕೆಲವರಿಗೆ ವಾಸಿಸಲು ಮನೆ ಇದ್ದರೂ, ಪರಿಹಾರ ಪಡೆದುಕೊಂಡು ಮರು ಮನೆ ನಿರ್ವಿುಸಿಕೊಂಡಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ತಹಸೀಲ್ದಾರ್ ಹಾಗೂ ತಾ.ಪಂ. ಇಒ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ನಂತರ, ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ, ‘ಸರ್ಕಾರಿ ಇಲಾಖೆ ಕಚೇರಿ ಬೀಗ ಜಡಿಯುವುದು ಅಪರಾಧವಾಗಿದೆ. ನಿಮ್ಮ ಬೇಡಿಕೆ ಕುರಿತು ತಹಸೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿ, ಪರಿಹಾರ ಕಂಡುಕೊಳ್ಳಬೇಕು’ ಎಂದರು.

ಪರಿಹಾರ ವಿತರಣೆಯಲ್ಲಿ ಉಂಟಾದ ಗೊಂದಲ ಬಗ್ಗೆ ಪರಿಶೀಲನೆ ಕೈಗೊಳ್ಳಲು ಲಿಖಿತ ರೂಪದಲ್ಲಿ ಮನವಿ ನೀಡಬೇಕು. ಮಳೆಗೆ ಮನೆ ಕಳೆದುಕೊಂಡವರು ಈಗಾಗಲೇ ಅರ್ಜಿ ಸಲ್ಲಿಸಿರುವ ಬಗ್ಗೆ ಮಾಹಿತಿ ನೀಡಬೇಕು. ನಂತರ, ಅಧಿಕಾರಿಗಳ ತಂಡ ರಚಿಸಿ ಮೇಲಧಿಕಾರಿಗಳ ಆದೇಶ ಪಡೆದು ಮರು ಸಮೀಕ್ಷೆ ಕೈಗೊಳ್ಳಲಾಗುವುದು ಎಂದು ಸಮಜಾಯಿಸಿ ನೀಡಿದರು. ನಂತರ ಪ್ರತಿಭಟನಾಕಾರರು ಗ್ರಾಪಂ ಬೀಗ ತೆರೆದರು.

ತಾ.ಪಂ. ಇಒ ಪಿ. ಮುನಿಯಪ್ಪ, ಪಿಎಸ್​ಐ ಎಚ್.ಎಸ್. ಶಿವಣ್ಣವರ, ಇಎಸ್​ಐ ಕೆ.ಜಿ. ರೂಗಿ, ಎಂ.ಎಸ್. ದೊಡ್ಡಮನಿ ಹಾಗೂ ಸಿಬ್ಬಂದಿ ಇದ್ದರು. ರೇಣುಕಾ ಲಮಾಣಿ, ಲಕ್ಷ್ಮವ್ವ ಲಮಾಣಿ, ರಾಜು ಲಮಾಣಿ, ಪುಟ್ಟವ್ವ ಲಮಾಣಿ, ಕಮಲವ್ವ ಲಮಾಣಿ, ಕಮಲವ್ವ ಹಂಚಿನಮನಿ, ರಾಮಕ್ಕ ಲಮಾಣಿ, ಶಂಕ್ರವ್ವ ಲಮಾಣಿ, ಜಿನಕವ್ವ ಲಮಾಣಿ, ಶಾಂತವ್ವ ಲಮಾಣಿ, ರಾಮವ್ವ ಕೊರಡೂರ, ಕಮಲವ್ವ ಲಮಾಣಿ, ಗುಜರವ್ವ ಲಮಾಣಿ, ನಾಗವ್ವ ಲಮಾಣಿ, ಶಾರವ್ವ ಲಮಾಣಿ, ನೂರಪ್ಪ ಲಮಾಣಿ, ಕುರವತೆಪ್ಪ ಲಮಾಣಿ, ಶಿವ್ವಪ್ಪ ಲಮಾಣಿ, ಸೋಮಪ್ಪ ಲಮಾಣಿ, ಮಲ್ಲೇಶ ಲಮಾಣಿ, ರಾಜು ಲಮಾಣಿ, ಭೀಮಣ್ಣ ಲಮಾಣಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.