ಜಿಲ್ಲೆ

ಬೇವಿನಹಳ್ಳಿ ಗ್ರಾಪಂ ಕಚೇರಿಗೆ ಬೀಗ: ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ

reportermys

ಮಂಡ್ಯ: ಗ್ರಾಮ ಪಂಚಾಯಿತಿ ಅಧ್ಯಕ್ಷರ ಅಧಿಕಾರಕ್ಕೆ ಕತ್ತರಿ ಹಾಕಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ತಾಲೂಕಿನ ಬೇವಿನಹಳ್ಳಿ ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ಸೋಮವಾರ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು. ಅಧ್ಯಕ್ಷ ಎಚ್.ಸಿ.ಯೋಗೇಶ್ ನೇತೃತ್ವದಲ್ಲಿ ಗ್ರಾಪಂ ಕಚೇರಿಗೆ ಬೀಗ ಜಡಿದು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಧ್ಯಕ್ಷರ ಅಧಿಕಾರ ಮೊಟಕುಗೊಳಿಸಿದರೆ ಸದಸ್ಯರ ಹಕ್ಕುಚ್ಯುತಿಯಾಗುತ್ತದೆ. ಪಂಚಾಯಿತಿ ವ್ಯವಸ್ಥೆಯಲ್ಲಿ ಜನರ ಕಷ್ಟಕ್ಕೆ ಸ್ಪಂದಿಸಲು ಅಧಿಕಾರಿಗಳಿಗಿಂತ ಸದಸ್ಯರ ಪಾತ್ರ ಮುಖ್ಯ ಎಂಬ ಅಂಶವನ್ನು ಸರ್ಕಾರ ಅರಿಯಬೇಕಿದೆ. ಕೂಡಲೇ ಈ ನಿರ್ಧಾರದಿಂದ ಹಿಂದೆ ಸರಿಯದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಉಪಾಧ್ಯಕ್ಷೆ ಜಯರತ್ನಾ, ಮಾಜಿ ಅಧ್ಯಕ್ಷ ಬಿ.ಎಂ.ಮಹೇಶ್, ಸದಸ್ಯರಾದ ಶಿವಣ್ಣ, ಕಾಳೇಗೌಡ, ರಮೇಶ್ , ಪುಷ್ಪಲತಾ, ಲೀಲಾವತಿ, ಮಂಜುಳಾ, ನರಸಮ್ಮ, ಕೀರ್ತನಾ ಇತರರಿದ್ದರು.