ಪ್ರವಾಸದ ಮಧ್ಯೆ ಹಾರಿಹೋಯ್ತು ಉಪಾಧ್ಯಕ್ಷೆ ಪುತ್ರನ ಜೀವ
ಗ್ರಾಪಂ ದುಡ್ಡಲ್ಲಿ ಕುಂಭಮೇಳ ಯಾತ್ರೆ ಬೇಕಿತ್ತಾ..?: ಗ್ರಾಮದಲ್ಲಿ ಬಿಸಿಬಿಸಿ ಚರ್ಚೆ
ಪ್ರಯಾಗರಾಜ್ ಮಹಾಕುಂಭಮೇಳಕ್ಕೆ ತೆರಳಿದ್ದ ಗ್ರಾಪಂ ಸದಸ್ಯರ ಕುಟುಂಬಗಳ ಪೈಕಿ ಉಪಾಧ್ಯಕ್ಷೆ ಪುತ್ರ ಅನಾರೋಗ್ಯದಿಂದ ಸಾವೀಗೀಡಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇದರ ನಡುವೆ ಗ್ರಾಪಂ ದುಡ್ಡಲ್ಲಿ ಗ್ರಾಪಂ ಸದಸ್ಯರು
ಪ್ರಯಾಗರಾಜ್ ಟ್ರಿಪ್ ಗೆ ಹೋಗಿದ್ದರೂ ಎಂಬ ಆರೋಪವೂ ಕೇಳಿಬಂದಿದೆ.
ಜಿಲ್ಲೆಯ ರೋಣ ತಾಲೂಕಿನ ಮಲ್ಲಾಪೂರ ಗ್ರಾಪಂ ಉಪಾಧ್ಯಕ್ಷೆ ಕರಿಯಮ್ಮ ಚಲವಾದಿ ಅವರ 39 ವರ್ಷದ ಪುತ್ರ ಹನಮಂತ ಚಲವಾದಿ ಬಿಳಿ ಕಾಮಾಲೆ ಹಾಗೂ ಕಿಡ್ನಿ ವೈಫಲ್ಯದಿಂದ ಸಾವಿಗೀಡಾಗಿದ್ದು, ಮೃತದೇಹವನ್ನು ಆಂಬುಲೆನ್ಸ ಮೂಲಕ ರವಿವಾರ ಮಲ್ಲಾಪೂರ ಗ್ರಾಮಕ್ಕೆ ತಂದು ಅಂತ್ಯಕ್ರಿಯೆ ನೆರವೇರಿಸಲಾಗಿದೆ.
ಗ್ರಾಪಂ ಉಪಾಧ್ಯಕ್ಷೆಯ ಮಗ ಸಾವಿನ ಬೆನ್ನಲ್ಲೆ ಗ್ರಾಪಂ ಸದಸ್ಯರ ಕುಟುಂಬಗಳು ಗ್ರಾಪಂ ದುಡ್ಡಲ್ಲೇ ಪ್ರಯಾಗರಾಜ್ ಮಹಾಕುಂಭಮೇಳಕ್ಕೆ ತೆರಳಿದ್ದರು ಎಂಬ ಬಿಸಿಬಿಸಿ ಚರ್ಚೆ ಮಲ್ಲಾಪೂರ ಹಾಗೂ ಸಂದಿಗವಾಡ ಗ್ರಾಮದಲ್ಲಿ ಹರಿದಾಡುತ್ತಿದೆ.
ಅಲ್ಲದೇ, ಕಿಡ್ನಿ ವೈಫಲ್ಯ ಹಾಗೂ ಬಿಳಿ ಕಾಮಾಲೆಯಿಂದ ಬಳಲುತ್ತಿದ್ದ ಹನುಮಂತ ಚಲವಾದಿ ಅವರನ್ನು ಯಾಕೆ ಮಹಾಕುಂಭಮೇಳಕ್ಕೆ ಕರೆದೊಯ್ಯಲಾಯಿತು ಎಂಬ ಚರ್ಚೆಗಳು ಕೂಡ ಗ್ರಾಮದಲ್ಲಿ ವ್ಯಾಪಿಸಿವೆ.
ಮಲ್ಲಾಪೂರ ಹಾಗೂ ಮಲ್ಲಾಪೂರ ಗ್ರಾಪಂ ವ್ಯಾಪ್ತಿಗೆ ಸೇರುವ ಸಂದಿಗವಾಡ ಗ್ರಾಮದಲ್ಲಿ ಒಟ್ಟು 13 ಜನ ಸದಸ್ಯರಿದ್ದು, ಆ ಪೈಕಿ ಅಧ್ಯಕ್ಷ ಹನಮಂತಗೌಡ ಹುಲ್ಲೂರ, ಉಪಾಧ್ಯಕ್ಷೆ ಪುತ್ರ ಹನುಮಂತ ಚಲವಾದಿ ಹಾಗೂ 11 ಸದಸ್ಯರು ಸೇರಿ ಒಟ್ಟು 24 ಜನರು ಫೆ. 16ರಂದು ಖಾಸಗಿ ವಾಹನ ಬಾಡಿಗೆ ಪಡೆದು ಪ್ರಯಾಗರಾಜ ಮಹಾಕುಂಭಮೇಳಕ್ಕೆ ಪ್ರಯಾಣ ಬೆಳೆಸಿದ್ದರು.
ಅನಾರೋಗ್ಯ ಪೀಡಿತನಾಗಿದ್ದ ಉಪಾಧ್ಯಕ್ಷೆ ಕರಿಯಮ್ಮ ಚಲವಾದಿ ಅವರ ಪುತ್ರ ಹನಮಂತ ಚಲವಾದಿ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿದ್ದು, ಅಲ್ಲಿಂದ ಆಂಬುಲೆನ್ಸ್ ಮೂಲಕ ಹುಬ್ಬಳ್ಳಿಯ ಎಸ್ಡಿಎಂಸಿ ಆಸ್ಪತ್ರೆಗೆ ಧಾವಿಸುವ ವೇಳೆ ಮಾರ್ಗಮಧ್ಯದಲ್ಲಿ ಸಾವುಗೀಡಾಗಿದ್ದಾನೆ. ಅಲ್ಲಿಂದ ನೇರವಾಗಿ ರವಿವಾರ ಮಲ್ಲಾಪೂರ ಗ್ರಾಮಕ್ಕೆ ತಂದು ಅಂತ್ಯಕ್ರಿಯೆ ನೆರವೇರಿಸಲಾಗಿದೆ.
ಗ್ರಾಪಂ ಅಧ್ಯಕ್ಷ ಸೇರಿ 11 ಸದಸ್ಯರು ಗ್ರಾಪಂ ದುಡ್ಡನ್ನು ದುರ್ಬಳಕೆ ಮಾಡಿಕೊಂಡು ಪ್ರಯಾಗರಾಜ್ ಮಹಾಕುಂಭಮೇಳಕ್ಕೆ ತೆರಳಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಆದರೆ, ಗ್ರಾಪಂ ಅಧ್ಯಕ್ಷ ಹನಮಂತಗೌಡ ಹುಲ್ಲೂರ ಅವರು ಗ್ರಾಪಂ ದುಡ್ಡನ್ನು ಬಳಸಿಕೊಂಡಿಲ್ಲ. ಎಲ್ಲ ಸದಸ್ಯರೂ ಕೂಡಿಕೊಂಡು ಬಾಂಡ್ ಮೂಲಕ ಬೇರೆಯವರ ಬಳಿ 3 ಲಕ್ಷ ರೂ. ಸಾಲ ಪಡೆದು ಪ್ರಯಾಗರಾಜ್ ಮಹಾಕುಂಭಮೇಳಕ್ಕೆ ತೆರಳಿದ್ದೇವು ಎಂಬುದಾಗಿ ತಿಳಿಸಿದ್ದಾರೆ. ಆದರೆ, ಎಲ್ಲ ಸದಸ್ಯರು ಕೂಡಿಕೊಂಡು ಬಾಂಡ್ ಮೇಲೆ ಮಹಾಕುಂಭಮೇಳಕ್ಕೆ ತೆರಳಿದ್ದು ಎಂಬ ಚರ್ಚೆಗಳು ಗ್ರಾಮದ ತುಂಬೆಲ್ಲ ಕೇಳಿಬರುತ್ತಿದೆ.
ಆದರೆ, ಪಿಡಿಒ ದೇವರಡ್ಡಿ ಹಂಚಿನಾಳ ಹೇಳುವ ಪ್ರಕಾರ ಸದಸ್ಯರು ಪ್ರಯಾಗರಾಜ್ ಮಹಾಕುಂಭಮೇಳಕ್ಕೆ ತೆರಳಿದ್ದ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.