ಜಿಲ್ಲೆ

ಬೆಸಗರಹಳ್ಳಿ ಗ್ರಾಪಂಗೆ ಅವಿರೋಧ ಆಯ್ಕೆ: ಜ್ಯೋತಿ ನಾರಾಯಣ ಅಧ್ಯಕ್ಷೆ, ಅಮಲಿ ಸಂಗೀತಾ ಉಪಾಧ್ಯಕ್ಷೆ

reportermys

ಮದ್ದೂರು: ತಾಲೂಕಿನ ಬೆಸಗರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಜ್ಯೋತಿ ನಾರಾಯಣ, ಉಪಾಧ್ಯಕ್ಷರಾಗಿ ಅಮಲಿ ಸಂಗೀತಾ ಅವಿರೋಧವಾಗಿ ಆಯ್ಕೆಯಾದರು.

ಅಧ್ಯಕ್ಷ ಸ್ಥಾನಕ್ಕೆ ಸೌಮ್ಯಾ ಬಿ.ಸತೀಶ್, ಉಪಾಧ್ಯಕ್ಷ ಸ್ಥಾನಕ್ಕೆ ಗಿರಿಜಾ ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಸೋಮವಾರ ಚುನಾವಣೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಜ್ಯೋತಿ ನಾರಾಯಣ, ಉಪಾಧ್ಯಕ್ಷ ಸ್ಥಾನಕ್ಕೆ ಅಮಲಿ ಸಂಗಿತ ಅವರನ್ನು ಹೊರತುಪಡಿಸಿ ಬೇರಾರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿಯೂ ಆದ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ರೇಖಾ ಘೋಷಿಸಿದರು.

ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಶಾಸಕ ಡಿ.ಸಿ.ತಮ್ಮಣ್ಣ ಅವರನ್ನು ನೂತನ ಅಧ್ಯಕ್ಷೆ ಜ್ಯೋತಿ ನಾರಾಯಣ ಮತ್ತು ಉಪಾಧ್ಯಕ್ಷೆ ಅಮಲಿ ಸಂಗೀತಾ ಅಭಿನಂದಿಸಿದರು. ಶಾಸಕ ಡಿ.ಸಿ.ತಮ್ಮಣ್ಣ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಜನರ ಆಶೋತ್ತರಗಳಿಗೆ ಅನುಗುಣವಾಗಿ ಆಡಳಿತ ನಡೆಸಿ. ಗ್ರಾಮೀಣ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಪಕ್ಷಭೇದ ಮರೆತು ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಎಂ.ಎಸ್.ಮಂಜುನಾಥ್, ಬಿ. ನಾಗರಾಜ ಮೂರ್ತಿ, ಬಿ.ಆರ್. ಪ್ರಸನ್ನ ಕುಮಾರ್, ಗಾಯತ್ರಿ, ಕಾವ್ಯಾ ರವಿ, ಮೂರ್ತಿ, ಚಿಣ್ಣೇಗೌಡ, ಅನಿತಾ, ಮುಖಂಡರಾದ ಮಾದನಾಯಕನಹಳ್ಳಿ ರಾಜಣ್ಣ, ಮಹರ್ನವಮಿದೊಡ್ಡಿ ರವಿ, ಬಾಬು, ಷಣ್ಮುಗ, ಕಾಳು ಶೇಖರ್ ಇತರರು ಇದ್ದರು.