ಜಿಲ್ಲೆ

ತಳಮಟ್ಟದಲ್ಲಿ ತಳವೂರಲು ಬಿಜೆಪಿ ಸಜ್ಜು

Gadag

ಗದಗ: ಗ್ರಾಮ ಪಂಚಾಯಿತಿ ಚುನಾವಣೆಯು ರಾಜಕೀಯ ಪಕ್ಷಗಳ ಚಿಹ್ನೆಯಡಿ ನಡೆಯದಿದ್ದರೂ ರಾಷ್ಟ್ರೀಯ ಪಕ್ಷಗಳು ಈ ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಭಾರಿ ಸಿದ್ಧತೆಯಲ್ಲಿ ತೊಡಗಿವೆ. ಬಿಜೆಪಿಯಲ್ಲಿ ಚುನಾವಣೆ ಕಾವು ತುಸು ಬಿರುಸಾಗಿದ್ದು, ಸ್ಥಳೀಯ ಮುಖಂಡರು ಸಭೆ ನಡೆಸಿ ಗ್ರಾಮೀಣ ಭಾಗದ ಕಾರ್ಯಕರ್ತರಿಗೆ ಸಲಹೆ- ಸೂಚನೆ ನೀಡುತ್ತಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷ ಇನ್ನೂ ಮೈಕೊಡವಿಕೊಂಡು ಎದ್ದೇಳಬೇಕಿದೆ.

ಬಿಜೆಪಿ ವತಿಯಿಂದ ನಗರದ ಅಂಬೇಡ್ಕರ್ ಭವನದಲ್ಲಿ ಗ್ರಾಮ ಸ್ವರಾಜ್ ಕಾರ್ಯಕ್ರಮ ಆಯೋಜಿಸಿ ಗ್ರಾಮೀಣ ಭಾಗದ ಪಕ್ಷದ ಕಾರ್ಯಕರ್ತರ ಬೆನ್ನಿಗೆ ನಾವಿದ್ದೇವೆ ಎಂಬ ಸಂದೇಶ ರವಾನಿಸಲಾಗಿದೆ. ಕಾರ್ಯಕರ್ತರನ್ನು ಗೆಲ್ಲಿಸಲು ನಾವು ಕೂಡಾ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಬಿಜೆಪಿ ಮುಖಂಡರು ಅಭಯ ನೀಡಿದ್ದರಿಂದ ಕೇಸರಿ ಪಡೆಯಲ್ಲಿ ಹುಮ್ಮಸ್ಸು ಜೋರಾಗಿದೆ. ಕಾಂಗ್ರೆಸ್​ನಲ್ಲಿ ಸದ್ಯಕ್ಕೆ ಅಂಥ ಹುರುಪು ಕಾಣದಿದ್ದರೂ ಸ್ಪರ್ಧಾಕಾಂಕ್ಷಿಗಳ ದೊಡ್ಡ ಹಿಂಡೇ ಇದೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಆಯ್ಕೆ, ಪ್ರಚಾರ, ಹಣಕಾಸಿನ ನೆರವು ಕುರಿತು ಚರ್ಚೆ ನಡೆದಿದೆ.

ತಳಮಟ್ಟದಲ್ಲಿ ಪಕ್ಷವನ್ನು ಗಟ್ಟಿಗೊಳಿಸಲು ಮತ್ತು ಪಕ್ಷದ ಸಾಮರ್ಥ್ಯವನ್ನು ಒರೆಗೆ ಹಚ್ಚಲು ಗ್ರಾಪಂ ಚುನಾವಣೆ ಉತ್ತಮ ವೇದಿಕೆಯಾಗಿದೆ. ಜಿಲ್ಲೆಯಲ್ಲಿ ಮೂರು ವಿಧಾನಸಭೆ ಕ್ಷೇತ್ರ ಹಾಗೂ ಇತ್ತೀಚೆಗೆ ಜರುಗಿದ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿರುವ ಕೇಸರಿ ಪಡೆಯ ನಾಯಕರು ಗ್ರಾಮ ಪಂಚಾಯಿತಿ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿರುವುದರಿಂದ ಈ ಸಲದ ಚುನಾವಣೆ ಪ್ರತಿಷ್ಠೆಯ ವಿಷಯ ಕೂಡ ಆಗಿದೆ. ಹೀಗಾಗಿ, ಜಿಲ್ಲೆಯ 117ರ ಪೈಕಿ ಕನಿಷ್ಠ 110 ಗ್ರಾಮ ಪಂಚಾಯಿತಿಗಳಲ್ಲಿ ಕಮಲ ಅರಳಿಸಬೇಕು ಎಂಬ ಗುರಿಯೊಂದಿಗೆ ಹೆಜ್ಜೆಯನ್ನಿರಿಸಿದ್ದಾರೆ.

ಗೂಂಡಾಗಿರಿಯದ್ದೇ ಕೈ ಮೇಲು; ಕೇಸರಿ ಪಡೆ ಒಡ್ಡಿದೆ ಸವಾಲು: ಜಿಲ್ಲೆಯ ನಾಲ್ಕು ವಿಧಾನಸಭೆ ಕ್ಷೇತ್ರಗಳ ಪೈಕಿ ರೋಣ, ನರಗುಂದ ಮತ್ತು ಶಿರಹಟ್ಟಿ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಆದರೆ, ಗದಗ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಬಿಜೆಪಿ ಶಾಸಕರಿರುವ ಕ್ಷೇತ್ರಗಳಲ್ಲಿ ಕೇಸರಿ ಪಡೆಗೆ ಹಿಡಿತ ಸಿಗಬಹುದು. ಆದರೆ, ಗದಗ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ 12 ಗ್ರಾಮ ಪಂಚಾಯಿತಿಗಳಲ್ಲಿ ಬಹುಪಾಲು ಗ್ರಾಪಂಗಳು ಕಾಂಗ್ರೆಸ್ ಹಿಡಿತದಲ್ಲಿವೆ. ಕುರ್ತಕೋಟಿ, ಅಸುಂಡಿ, ಹುಲಕೋಟಿ, ಅಂತೂರಬೆಂತೂರು ಮುಂತಾದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರು ಬಲಾಢ್ಯರಿದ್ದಾರೆ. ಹೀಗಾಗಿ, ಸ್ವಾತಂತ್ರ್ಯ ಬಂದಾಗಿನಿಂದಲೂ ಆ ಗ್ರಾಮ ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಬೆಂಬಲಿತರೇ ಆಡಳಿತ ನಡೆಸಿದ್ದಾರೆ.

ಏಕಮುಖ ಚುನಾವಣೆ ನಡೆಸುವುದು, ಕಾಂಗ್ರೆಸ್ ಹೊರತುಪಡಿಸಿ ಬೇರೆ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸದಂತೆ ನೋಡಿಕೊಳ್ಳುವುದು, ಆಕಸ್ಮಾತ್ ಆಗಿ ಬೇರೆ ಪಕ್ಷದಿಂದ ಸ್ಪರ್ಧಿಸಿದರೆ ಅಂತಹ ಅಭ್ಯರ್ಥಿಗೆ ವಿನಾಕಾರಣ ಕಿರುಕುಳ ಕೊಡುವಂತಹ ಅನಾಗರಿಕ ವರ್ತನೆ ಗದಗ ವಿಧಾನಸಭೆ ಕ್ಷೇತ್ರದ ಕೆಲ ಗ್ರಾಪಂಗಳಲ್ಲಿ ಇನ್ನೂ ಇದೆ ಎಂಬ ಆರೋಪವೂ ಇದೆ. ಇಂತಹ ಪರಂಪರೆಗೆ ಸ್ಥಳೀಯ ಮುಖಂಡ ಅನಿಲ ಮೆಣಸಿನಕಾಯಿ ನೇತೃತ್ವದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನ್ಯಾಯಸಮ್ಮತವಾಗಿ ಚುನಾವಣೆ ನಡೆಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿಗೆ ಈಗಾಗಲೇ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಗದಗ ಕ್ಷೇತ್ರದ ಗ್ರಾಮೀಣ ಭಾಗದಲ್ಲೂ ಈ ಸಲ ಕೇಸರಿ ಪಡೆಯ ಜಯಭೇರಿ ಮೊಳಗಿಸಲು ಶತಾಯಗತಾಯ ಪ್ರಯತ್ನ ನಡೆಸಿದೆ.

ಕಳೆದ ಹಲವಾರು ದಶಕಗಳಿಂದ ಹುಲಕೋಟಿ, ಕುರ್ತಕೋಟಿ, ಅಸುಂಡಿ, ಅಂತೂರು ಬೆಂತೂರು ಸೇರಿ ಗದಗ ವಿಧಾನಸಭೆ ಕ್ಷೇತ್ರದ ಕೆಲ ಗ್ರಾಪಂಗಳಲ್ಲಿ ನ್ಯಾಯ ಸಮ್ಮತವಾಗಿ ಚುನಾವಣೆ ನಡೆದಿರುವ ಬಗ್ಗೆ ಸಂಶಯವಿದೆ. ಗೂಂಡಾಗಿರಿ ಮಾಡುವ, ಮತದಾರರನ್ನು ಭಯಪಡಿಸುವ ಕೆಲಸ ಇಂದು ನಿನ್ನೆಯದಲ್ಲ. ಇದಕ್ಕೆ ಕಡಿವಾಣ ಹಾಕಬೇಕು. ಜಿಲ್ಲಾಡಳಿತ ಇದಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಮುಕ್ತವಾಗಿ ಚುನಾವಣೆ ನಡೆಯಲು ವಾತಾವರಣ ನಿರ್ವಿುಸಬೇಕು. ಕಾಂಗ್ರೆಸ್ ಮುಖಂಡರ ಕೈಗೆ ಸಿಕ್ಕು ಒದ್ದಾಡುತ್ತಿರುವ ಇಂತಹ ಗ್ರಾಮ ಪಂಚಾಯಿತಿಗಳು ಮತ್ತು ಅಲ್ಲಿನ ಮತದಾರರಿಗೆ ಸ್ವಾತಂತ್ರ್ಯ ನೀಡಬೇಕಿದೆ.