ರೋಣ: ತಾಲೂಕಿನ ಜಿಗಳೂರ ಗ್ರಾಮಕ್ಕೆ ಪಂಚಾಯಿತಿ ಸ್ಥಾನಮಾನ ನೀಡದಿದ್ದರೆ, ಕಳೆದ ಬಾರಿಯಂತೆ ಈ ಸಲವೂ ಗ್ರಾಪಂ ಚುನಾವಣೆಯನ್ನು ಬಹಿಸ್ಕರಿಸಲಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ‘ವಿಜಯವಾಣಿ’ ಜತೆ ಮಾತನಾಡಿದ ಗ್ರಾಮಸ್ಥರು, ‘10 ಗ್ರಾಮಗಳನ್ನು ಒಳಗೊಂಡ ಇಟಗಿ ಗ್ರಾಮ ಪಂಚಾಯಿತಿಯನ್ನು ಒಡೆದು 2015ರಲ್ಲಿ ಹೊಸದಾಗಿ ಹೊಸಳ್ಳಿ ಗ್ರಾಮ ಪಂಚಾಯಿತಿಯನ್ನು ಸೃಷ್ಟಿಸಲಾಯಿತು. ಅದರ ವ್ಯಾಪ್ತಿಗೆ ಹೊಸಳ್ಳಿ, ಜಿಗಳೂರ, ಕಳಕಾಪುರ ಗ್ರಾಮಗಳನ್ನು ಸೇರಿಸಲಾಯಿತು. ಈ ಸಂದರ್ಭದಲ್ಲಿ ಜಿಗಳೂರ ಗ್ರಾಮದಲ್ಲೇ ಪಂಚಾಯಿತಿ ಸ್ಥಾಪಿಸುವುದರ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿತ್ತು. ಈ ಪ್ರಕಾರ ಸರ್ಕಾರದ ಮಟ್ಟದಲ್ಲಿ ಹೆಸರು ದಾಖಲಾಗಿತ್ತು. ಆದರೆ, ಕೊನೆಗಳಿಗೆಯಲ್ಲಿ ನಮ್ಮೂರಿಗಿಂತಲೂ ಕಡಿಮೆ ಜನರಿರುವ ಹೊಸ್ಳಳಿ ಗ್ರಾಮದಲ್ಲಿ ಪಂಚಾಯಿತಿಯನ್ನು ಸ್ಥಾಪಿಸಲಾಗಿದೆ. ಇದನ್ನು ಖಂಡಿಸಿ ಕಳೆದ ಬಾರಿಯ ಗ್ರಾಪಂ ಚುನಾವಣೆಯನ್ನು ಬಹಿಷ್ಕರಿಸಿದ್ದೇವೆ. ಅಲ್ಲದೆ, ಗ್ರಾಪಂ ಚುನಾವಣೆ ನಿಗದಿ ಮಾಡುವುದರ ಒಳಗಾಗಿ ಜಿಗಳೂರಿನಲ್ಲಿ ಪಂಚಾಯಿತಿ ಸ್ಥಾಪಿಸಬೇಕು. ಇಲ್ಲದಿದ್ದರೆ ಈ ಬಾರಿಯೂ ಚುನಾವಣೆಯನ್ನು ಬಹಿಷ್ಕರಿಸ್ತುತೇವೆ ಎಂದು ನ.26 ರಂದು ಗ್ರಾಮದಲ್ಲಿ ಆಯೋಜಿಸಿದ್ದ ಗ್ರಾಮ ಸಭೆಯಲ್ಲಿ ಠರಾವು ಬರೆಸಲಾಗಿದೆ. ಆದರೂ ಯಾರೊಬ್ಬರೂ ಕ್ರಮ ಕೈಗೊಂಡಿಲ್ಲ. ಪಂಚಾಯಿತಿಗಾಗಿ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದೇವೆ. ನಮ್ಮ ಬೇಡಿಕೆ ಈಡೇರುವವರೆಗೂ ಹೋರಾಟ ನಿಲ್ಲಿಸುವುದಿಲ್ಲ’ ಎಂದು ಗ್ರಾಮದ ಮುಖಂಡ ಬಾಬುಗೌಡ ಪಾಟೀಲ, ಇತರರು ತಿಳಿಸಿದ್ದಾರೆ.
ಹೊಸಳ್ಳಿಯಲ್ಲಿ ನೂತನ ಗ್ರಾಮ ಪಂಚಾಯಿತಿ ಸ್ಥಾಪನೆಗೊಂಡ ನಂತರ ಅಲ್ಲಿ ಸಮರ್ಪಕವಾಗಿ ಕೆಲಸ ಮಾಡಲು ಆಗದೆ, ಹತ್ತಾರು ಪಿಡಿಒಗಳು ವರ್ಗಾವಣೆಯಾಗಿ ಹೋಗಿರುವುದನ್ನು ನೋಡಿದರೆ ಅಲ್ಲಿನ ವ್ಯವಸ್ಥೆ ಹೇಗಿದೆ ಎನ್ನುವುದು ಮನದಟ್ಟಾಗುತ್ತದೆ. ಈ ನಿಟ್ಟಿನಲ್ಲಿ ಜಿಗಳೂರು ಗ್ರಾಮದ್ಲಲೇ ಪಂಚಾಯಿತಿಯನ್ನು ಸ್ಥಾಪಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ರೋಣಗಜೇಂದ್ರಗಡ ರಸ್ತೆಯಲ್ಲಿರುವ ಜಿಗಳೂರ ಕಮಾನ್ ಹತ್ತಿರ ಒಂದು ಎಕರೆ ಸರ್ಕಾರಿ ಜಾಗವಿದ್ದು, ಅಲ್ಲಿ ಗ್ರಾಪಂ ಕಾರ್ಯಾಲಯ ನಿರ್ವಿುಸಬೇಕು. ಇಲ್ಲದಿದ್ದರೆ ನಮ್ಮ ದಾರಿ ನಮಗೆ ಎಂದು ಗ್ರಾಮಸ್ಥರಾದ ಬಸವರಾಜ ಹುನಗುಂದ, ದುರ್ಗಪ್ಪ ಮಾದರ, ಶೇಖರಪ್ಪ ಗೋಲಪ್ಪನವರ, ಸೋಮಶೇಖರಗೌಡ ಪಾಟೀಲ ಎಚ್ಚರಿಕೆ ನೀಡಿದ್ದಾರೆ.
ನಮ್ಮೂರಿಗೆ ಗ್ರಾಮ ಪಂಚಾಯಿತಿ ನೀಡಬೇಕು ಎಂದು ಆಗ್ರಹಿಸಿ ಜಿಗಳೂರ ಗ್ರಾಮಸ್ಥರು ಕಳೆದ ಸಲ ಗ್ರಾಪಂ ಚುನಾವಣೆಯನ್ನು ಬಹಿಷ್ಕರಿಸಿದ್ದರು. ಈಗ ಮತ್ತದೇ ಬೇಡಿಕೆಯನ್ನು ಮುಂದಿಟ್ಟುಕೊಂಡು ಗ್ರಾಮ ಸಭೆಯಲ್ಲಿ ಈ ಕುರಿತು ಠರಾವು ಪಾಸ್ ಮಾಡಿದ್ದಾರೆ. ಜಿಗಳೂರಿಗೆ ಗ್ರಾಪಂ ಸ್ಥಾನ ನೀಡಬೇಕು. ಗ್ರಾಮದ ಹತ್ತಿರವಿರುವ ಒಂದು ಎಕರೆ ಸರ್ಕಾರಿ ಜಾಗದಲ್ಲಿ ನೂತನ ಗ್ರಾಪಂ ಕಾರ್ಯಾಲಯ ಸ್ಥಾಪಿಸಬೇಕು ಎಂದು ಒತ್ತಾಯಿಸಿದ್ದಾರೆ. | ಶಿವು ಡೊಳ್ಳಿನ, ಹೊಸಳ್ಳಿ ಗ್ರಾಪಂ ವಿಸ್ತೀರಣಾಧಿಕಾರಿ
ಸರ್ಕಾರಿ ಸೌಲಭ್ಯದಿಂದ ದೂರ: ಪಂಚಾಯಿತಿ ಸ್ಥಾಪನೆಗೆ ಆಗ್ರಹಿಸಿ ಕಳೆದ ಐದು ವರ್ಷಗಳಿಂದ ನೀರು ಹಾಗೂ ವಿದ್ಯುತ್ ಬಿಟ್ಟರೆ ಬೇರೆ ಯಾವುದೇ ಸೌಲಭ್ಯ ಪಡೆಯದೇ ಹೋರಾಟ ನಡೆಸುತ್ತಿದ್ದೇವೆ. ಎರಡು ವರ್ಷಗಳ ಕಾಲ ನೀರು ಮತ್ತು ವಿದ್ಯುತ್ ನಿರ್ವಹಣೆಗಾಗಿ ಗ್ರಾಮಸ್ಥರೇ ವಂತಿಗೆ ಹಣ ಸಂಗ್ರಹಿಸಿ ಕಾರ್ಯ ನಿರ್ವಹಿಸಿದ್ದೇವೆ. ವಿದ್ಯುತ್ ಬಲ್ಬ್ ಸುಟ್ಟರೂ ನಾವೇ ಹಾಕಿದ್ದೇವೆ. ರಸ್ತೆಗಳು ಹದಗೆಟ್ಟಿವೆ, ಊರಲ್ಲಿ ಶೌಚಗೃಹದ ಸಮಸ್ಯೆ ಇದೆ. ಆದರೂ ನಮ್ಮ ಸಮಸ್ಯೆಯನ್ನು ಯಾರೊಂದಿಗೂ ಹಂಚಿಕೊಂಡಿಲ್ಲ. ನಿರಾಶ್ರಿತರಿಗಾಗಿ 200 ಆಶ್ರಯ ಮನೆ ಹಂಚಿಕೆಯಾದರೂ, ಊರಿನ ಯಾರೊಬ್ಬರೂ ಆಶ್ರಯ ಮನೆ ಪಡೆದಿಲ್ಲ. ಊರಲ್ಲಿ ನಾಲ್ಕು ವಾರ್ಡ್ಗಳಿದ್ದರೂ ಚುನಾವಣೆ ನಡೆಯದ ಕಾರಣ ಯಾರನ್ನೂ ಆಯ್ಕೆ ಮಾಡಿಲ್ಲ. ಗ್ರಾಮದಲ್ಲಿ 2500 ಜನರಿದ್ದರೂ ಯಾವುದೇ ಸಹಯಾಕ್ಕಾಗಿ ಹೊಸಳ್ಳಿ ಗ್ರಾಮ ಪಂಚಾಯಿತಿಯ ಮೆಟ್ಟಿಲು ಹತ್ತಿಲ್ಲ. ಇದುವರೆಗೂ ಗ್ರಾಮಸ್ಥರೆಲ್ಲರೂ ಒಗ್ಗಟ್ಟು ಪ್ರದರ್ಶಿಸಿದ್ದೇವೆ ಎನ್ನುತ್ತಾರೆ ಜಿಗಳೂರಿನ ನಿವಾಸಿಗಳು.