- ಭರತ್ ಶೆಟ್ಟಿಗಾರ್, ಮಂಗಳೂರು
ಗ್ರಾಮ ಪಂಚಾಯಿತಿಗಳಿಗೆ ನೀಡಿದ ಅನುದಾನಗಳ ಮಾಹಿತಿಯನ್ನು ಇಲಾಖೆಗಳು ಸರ್ಕಾರಕ್ಕೆ ಸಕಾಲಕ್ಕೆ ನೀಡದ ಕಾರಣ, 2020-21ನೇ ಸಾಲಿನ ‘ಗ್ರಾಮ ಪಂಚಾಯಿತಿ ಆಯವ್ಯಯ ಪುಸ್ತಕ’ ತಯಾರಿ ಪ್ರಕ್ರಿಯೆ ವಿಳಂಬವಾಗಿದೆ. ಗ್ರಾಪಂ ಆಡಳಿತದಲ್ಲಿ ಪಾರದರ್ಶಕತೆ ತರಲು ಹಾಗೂ ಸಾರ್ವಜನಿಕರ ಮಾಹಿತಿಗಾಗಿ ಗ್ರಾಮ ಪಂಚಾಯಿತಿ ಆಯವ್ಯಯ ಪುಸ್ತಕ ತಯಾರಿಸಲು ಉದ್ದೇಶಿಸಲಾಗಿದೆ. ಗ್ರಾಪಂವಾರು ಯೋಜನೆ, ಕಾರ್ಯಕ್ರಮಗಳಿಗೆ ಮಾಡಲಾದ ಅನುದಾನ ಹಂಚಿಕೆ ವಿವರವನ್ನು ಎಲ್ಲ ಇಲಾಖೆಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಗೆ ಕಳುಹಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿ ನಿರ್ದೇಶನ ನೀಡಿದ್ದರು. ಆದರೆ ಬಹುತೇಕ ಇಲಾಖೆಗಳು ಗ್ರಾಪಂಗಳಿಗೆ ಅನುದಾನ ಹಂಚಿಕೆ ಮಾಡುತ್ತಿಲ್ಲ ಎಂದು ನಮೂದಿಸಿ ‘ಶೂನ್ಯ ಅನುದಾನ’ ಎಂದು ವರದಿ ನೀಡಿವೆ. ಇದರಿಂದ ಗ್ರಾಪಂಗಳಿಗೆ ನಿಗದಿತ ಅವಧಿ(ಫೆ.16)ಯಲ್ಲಿ ಆಯವ್ಯಯ ಪುಸ್ತಕ ಪ್ರಕಟಿಸಲು ಸಾಧ್ಯವಾಗಿಲ್ಲ.
ಜಿಲ್ಲಾಮಟ್ಟದಲ್ಲಿ ಮಾಹಿತಿ: ಇಲಾಖೆಗಳಿಂದ ನೇರವಾಗಿ ಗ್ರಾಪಂಗಳಿಗೆ ಅನುದಾನ ಹಂಚಿಕೆಯಾಗುವುದಿಲ್ಲ. ಆದರೂ, ಕಾರ್ಯಕ್ರಮಗಳ ಅನುಷ್ಠಾನ ಗ್ರಾಪಂ ವ್ಯಾಪ್ತಿಯಲ್ಲಿ ಆಗುವ ಕಾರಣ, ಅವುಗಳ ಮಾಹಿತಿ ಜಿಲ್ಲಾ ಮಟ್ಟದಲ್ಲಿ ಪಡೆಯಲು ಸಾಧ್ಯವಾಗುತ್ತದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಕೃಷಿ ಮತ್ತು ತೋಟಗಾರಿಕಾ ಇಲಾಖೆ, ಆರೋಗ್ಯ ಇಲಾಖೆಗಳು ಪಂಚಾಯಿತಿ ಮಟ್ಟದಲ್ಲಿ ಹೆಚ್ಚಿನ ಅನುದಾನ ಮತ್ತು ಕಾರ್ಯಕ್ರಮ ಆಯೋಜಿಸುತ್ತವೆ. ಜಿಲ್ಲಾ ಮಟ್ಟದಿಂದ ಎಷ್ಟು ಮೊತ್ತ ಬಿಡುಗಡೆಯಾಗುತ್ತದೆ ಎನ್ನುವುದನ್ನು ಸುಲಭವಾಗಿ ವರ್ಗೀಕರಿಸಿ ಅಂದಾಜಿಸಬಹುದಾಗಿದೆ. ಆದ್ದರಿಂದ ತುರ್ತಾಗಿ ಈ ಕೆಲಸ ಮಾಡಿ ಮುಗಿಸಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಸೂಚನೆ ನೀಡಿದ್ದಾರೆ.
ಯಾಕೆ ಬೇಕು ಆಯವ್ಯಯ ಪುಸ್ತಕ?: ರಾಷ್ಟ್ರದಲ್ಲಿ ಪಂಚಾಯತ್‌ರಾಜ್ ವ್ಯವಸ್ಥೆಯನ್ನು ಸದೃಢ ಮತ್ತು ಸಶಕ್ತಗೊಳಿಸಲು ಸಂವಿಧಾನಕ್ಕೆ 73ನೇ ತಿದ್ದುಪಡಿ ತಂದು ಸಂವಿಧಾನದ ಶೆಡ್ಯೂಲ್ 11ರಲ್ಲಿ ಪಂಚಾಯತ್‌ರಾಜ್ ಸಂಸ್ಥೆಗಳಿಗೆ ಜವಾಬ್ದಾರಿ ನೀಡಲಾಗಿದೆ. ಈ ಆಶಯವನ್ನು ಸಾಧಿಸುವಲ್ಲಿ ಕರ್ನಾಟಕ ಪಂಚಾಯತ್‌ರಾಜ್ ಅಧಿನಿಯಮ-1993ರನ್ನು ಜಾರಿಗೆ ತಂದು ಗ್ರಾಪಂಗಳಿಗೆ 29 ವಿಷಯ(ಇಲಾಖೆ)ಗಳ ಜವಾಬ್ದಾರಿ ವಹಿಸಲಾಗಿದೆ. ರಾಜ್ಯ ಸರ್ಕಾರದ ಹಿಂದಿನ ಅವಧಿಯ ಬಜೆಟ್ ಘೋಷಣೆಯಂತೆ ಪ್ರತೀ ವರ್ಷ ಗ್ರಾಪಂ ಮಟ್ಟದಲ್ಲಿ ಆಯವ್ಯಯ ಪುಸ್ತಕ ಸಿದ್ಧಪಡಿಸುವುದು ಆಯಾ ಪಂಚಾಯಿತಿಗಳ ಜವಾಬ್ದಾರಿ. ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳಡಿ ಅನುಷ್ಠಾನಗೊಳಿಸುವ ಯೋಜನೆ ಅಥವಾ ಕಾರ್ಯ ಕ್ರಮಗಳ ವಿವರ ಮತ್ತು ಅನುದಾನ ಹಂಚಿಕೆ ಮಾಹಿತಿ ಲಭ್ಯವಾದಲ್ಲಿ ಗ್ರಾಪಂಗಳು ಹೆಚ್ಚು ಸಮರ್ಥ ಮತ್ತು ಪರಿಣಾಮಕಾರಿ ಕಾರ್ಯ ನಿರ್ವಹಣೆ ಸಾಧ್ಯ. ಅನುದಾನಗಳ ವಿವರ ಸಾರ್ವಜನಿಕರಿಗೆ ನೇರ ತಲುಪಿಸಲು ಸಾಧ್ಯ ಎನ್ನುವುದು ಸರ್ಕಾರದ ಉದ್ದೇಶ.
ಇಲಾಖಾ ಮುಖ್ಯಸ್ಥರು ತಮ್ಮ ಇಲಾಖೆಯಲ್ಲಿ ಅನುಭವಿ, ಕ್ರಿಯಾಶೀಲ ಅಧಿಕಾರಿಗಳ ತಂಡ ರಚಿಸಿದರೆ, ಈ ಜವಾಬ್ದಾರಿಯನ್ನು ಕಾಲಮಿತಿಯಲ್ಲಿ ಪೂರೈಸಲು ಸಾಧ್ಯ. ವಿಳಂಬಕ್ಕೆ ಆಸ್ಪದ ನೀಡದೆ ಇಲಾಖೆಗಳು ಕೂಡಲೇ ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್ ಇಲಾಖೆಗೆ ಮಾಹಿತಿ ನೀಡಬೇಕೆಂದು ಸೂಚನೆ ನೀಡಲಾಗಿದೆ.
- ಪಿ.ರವಿಕುಮಾರ್, ಸರ್ಕಾರದ ಮುಖ್ಯ ಕಾರ್ಯದರ್ಶಿ