ಜಿಲ್ಲೆ

ಕಸದಿಂದ ರಸ ತಗೆಯುತ್ತಿರುವ ಗೌರಿಬಿದನೂರು ನಗರಸಭೆ

Rest of Bengaluru - Chikkaballapura - Venkatesh

ಚಿಕ್ಕಬಳ್ಳಾಪುರ: ನಗರದಲ್ಲಿ ಸಂಗ್ರಹವಾಗುವ ತ್ಯಾಜ್ಯದಿಂದ ಕಾಂಪೋಸ್ಟ್ ಗೊಬ್ಬರ ತಯಾರಿಸುವ ಮೂಲಕ ಗೌರಿಬಿದನೂರು ನಗರಸಭೆಯು ಮೆಚ್ಚುಗೆಗೆ ಪಾತ್ರವಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ವೈಜ್ಞಾನಿಕವಾಗಿ ಕಸ ಸಂಗ್ರಹ ಹಾಗೂ ಸಂಸ್ಕರಣೆ ಪ್ರಾರಂಭಿಸಿದ ಮೊದಲ ನಗರಸಭೆ ಎಂಬ ಖ್ಯಾತಿಗೆ ಗೌರಿಬಿದನೂರು ಪಾತ್ರವಾಗಿದೆ. ಇದೀಗ ಇನ್ನೂ ಒಂದು ಹೆಜ್ಜೆ ಮುಂದಿರಿಸಿದೆ. ನಗರದಲ್ಲಿ ಸಂಗ್ರಹವಾಗುವ ಹಸಿ ಹಾಗೂ ಒಣ ಕಸವನನ್ನು ಬೇರ್ಪಡಿಸಿ ಕಾಂಪೋಸ್ಟ್ ಗೊಬ್ಬರನ್ನು ತಯಾರಿಸಿ ಅಗತ್ಯವುಳ್ಳವರಿಗೆ ಮಾರಾಟ ಮಾಡುತ್ತಿದೆ.

*64 ಲಕ್ಷ ಮೊತ್ತದ ಯಂತ್ರೋಪಕರಣ*
ನಗರದ 31 ವಾರ್ಡ್ ಗಳಲ್ಲಿ ನಿತ್ಯ ಸಂಗ್ರಹಿಸುವ ತ್ಯಾಜ್ಯವನ್ನು ಗೌರಿಬಿದನೂರು ಇಡುಗೂರು ರಸ್ತೆಯಲ್ಲಿ ಸ್ಥಾಪಿಸಿರುವ ನಗರಸಭೆಯ ತ್ಯಾಜ್ಯ ವಿಲೇವಾರಿ ಘಟಕಕ್ಕೆ ರವಾನಿಸಲಾಗುತ್ತದೆ. ಅಲ್ಲಿ ಹಸಿ ಹಾಗೂ ಒಣ ಕಸವನ್ನು ಬೇರ್ಪಡಿಸಿ ವೈಜ್ಞಾನಿಕವಾಗಿ ಸಂಸ್ಕರಿಸಲಾಗುತ್ತದೆ. ಅದಾದ ಬಳಿಕ ಹಸಿ ಕಸವನ್ನು ಕಾಂಪೋಸ್ಟ್ ಗೊಬ್ಬರಕ್ಕೆ ಬಳಸಿಕೊಳ್ಳಲಾಗುತ್ತದೆ. ಇದಕ್ಕೆ 64 ಲಕ್ಷ ರೂ. ವೆಚ್ಚದ ಯಂತ್ರೋಪಕರಣಗಳನ್ನು ಅಳವಡಿಸಲಾಗಿದೆ.

  • ಗೌರಿಬಿದನೂರು ನಗರಸಭೆಯ ಮಹತ್ತರ ಯೋಜನೆಯು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ. ವ್ಯವಸ್ಥಿತವಾಗಿ ತ್ಯಾಜ್ಯವನ್ನು ಸಂಗ್ರಹಿಸುವುದರಿಂದ ನಗರದ ಅಂದ ಹೆಚ್ಚಲಿದೆ. ಈಗ ಕಾಂಪೋಸ್ಟ್ ಗೊಬ್ಬರನ್ನು ತಯಾರಿಸಿ ಕೈಗೆಟುಕುವ ದರದಲ್ಲಿ ರೈತರಿಗೆ ಮಾರುತ್ತಿರುವುದು ಒಳ್ಳೆಯದು.

    ಡಿ.ಜೆ.ಚಂದ್ರ ಮೋಹನ್, ನಗರಸಭೆ ಮಾಜಿ ಸದಸ್ಯ, ಗೌರಿಬಿದನೂರು
  • ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಸಹಕಾರದಿಂದ ಆಧುನಿಕ ಮಾದರಿಯ ತ್ಯಾಜ್ಯ ಸಂಸ್ಕರಣಾ ಘಟಕ ಸಿದ್ಧಪಡಿಸಲಾಗಿದೆ. ಈಗಾಗಲೇ ಕಾಂಪೋಸ್ಟ್ ಗೊಬ್ಬರ ತಯಾರಿಕೆಗೆ ಚಾಲನೆ ನೀಡಲಾಗಿದೆ. ತೂಕ ಅಳತೆಗೆ ಆಧುನಿಕ ಯಂತ್ರೋಪಕರಣಗಳನ್ನು ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಕೈಗೆಟಕುವ ದರದಲ್ಲಿ ಕಾಂಪೋಸ್ಟ್ ಗೊಬ್ಬರ ದೊರೆಯಲಿದೆ.

    ಗೀತಾ, ನಗರಸಭೆ ಆಯುಕ್ತೆ, ಗೌರಿಬಿದನೂರು