ಜಿಲ್ಲೆ

ನಗರದಾದ್ಯಂತ ಸಂಭ್ರಮದಿಂದ ಗೌರಿ ಗಣೇಶ ಹಬ್ಬ ಆಚರಣೆ

ಬೆಂಗಳೂರು: ನಗರದೆಲ್ಲೆಡೆ ಸೋಮವಾರ ಸಡಗರ, ಸಂಭ್ರಮದಿಂದ ಗೌರಿ ಹಾಗೂ ಗಣೇಶ ಹಬ್ಬ ಆಚರಿಸಲಾಯಿತು. ಕೆಲವೆಡೆ ಮಂಗಳವಾರ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು.

ಈ ಬಾರಿ 2.50 ಕೋಟಿ ರೂ. ನೋಟು ನಾಣ್ಯಗಳಿಂದ ಅಲಂಕೃತಗೊಂಡಿರುವ ಗಣೇಶ, ಪ್ರೇಪರ್ ನಿಂದ ತಯಾರಿಸಲಾದ 21 ಅಡಿ ಎತ್ತರದ ಗಣೇಶ, ಕಾಂತಾರ ಗಣಪ, ಹುಲಿಯ ವಾಹನ ಏರಿ ಸಾಗುತ್ತಿರುವ ಗಣೇಶ, ಪ್ರಧಾನಿ ಮೋದಿಗೆ ಸಿಂೋಲ್ (ದಂಡ) ನೀಡುತ್ತಿರುವ ಗಣೇಶ ಹೀಗೆ ತರಹೇವಾಗಿ ಗಣೇಶ ಈ ಬಾರಿಯ ಹಬ್ಬದ ಆಕರ್ಷಣೆಗಳಾಗಿವೆ.

ನೋಟು ನಾಣ್ಯಗಳ ಆಲಂಕಾರ:

ಹಲವು ವಿಶೇಷತೆಗಳ ಮೂಲಕ ಜನರನ್ನು ಆಕರ್ಷಿಸುವ ಜೆ.ಪಿ. ನಗರದ ಪುಟ್ಟೇನಹಳ್ಳಿಯಲ್ಲಿರುವ ಶ್ರೀ ಸತ್ಯಗಣಪತಿ ದೇವಸ್ಥಾನದಲ್ಲಿ ಈ ಬಾರಿ ಸುಮಾರು 56 ಲಕ್ಷ ಮೌಲ್ಯದ 5, 10 ಹಾಗೂ 20 ರೂ. ನಾಣ್ಯಗಳನ್ನು ಹಾಗೂ 2.5 ಕೋಟಿ ರೂ. ಮೌಲ್ಯದ 10, 20, 50, 100, 200 ಮತ್ತು 500 ರೂ. ನೋಟ್‌ಗಳನ್ನು ಬಳಸಿ ವಿಶೇಷ ಅಲಂಕಾರ ಮಾಡಲಾಗಿದೆ. ಇದಕ್ಕಾಗಿ ಕಳೆದ ಒಂದು ತಿಂಗಳಿನಿಂದ 150 ಮಂದಿ ಶ್ರಮಿಸಿದ್ದಾರೆ. ಭದ್ರತೆ ದೃಷ್ಟಿಯಿಂದ ದೇವಾಲಯದ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದ್ದು, ಜೊತೆಗೆ ಭದ್ರತಾ ಸಿಬ್ಬಂದಿ ಸಹ ನೇಮಿಸಲಾಗಿದ.

ನಾಣ್ಯಗಳಿಂದಲೇ ಗಣೇಶನ ಪೋಟೋ, ಜೈ ಕರ್ನಾಟಕ, ನೇಷನ್ ಫರ್ಸ್ಟ್, ವಿಕ್ರಮ್ ಲ್ಯಾಂಡರ್, ಚಂದ್ರಯಾನ-3 ಮತ್ತು ಜೈ ಜವಾನ್ ಜೈ ಕಿಸಾನ್ ಚಿತ್ರಗಳನ್ನು ನಿರ್ಮಿಸಲಾಗಿದೆ. ಈ ಬಾರಿಯ ಅಲಂಕಾರ ಭಕ್ತರನ್ನು ಪುಳಕಿತಗೊಳಿಸಿದೆ. ಈ ಅಲಂಕಾರ ಒಂದು ವಾರಕಾಲ ಇರಲಿದ್ದು, ಭಕ್ತರು ದರ್ಶನ ಪಡೆಯಬಹುದಾಗಿದೆ ಎಂದು ಟ್ರಸ್ಟ್‌ನ ಟ್ರಸ್ಟಿ ರಾಮ್ ಮೋಹನ್ ರಾಜು ತಿಳಿಸಿದ್ದಾರೆ.

21 ಅಡಿ ಎತ್ತರದ ಗಣೇಶ:

ಯಲಹಂಕದ ಜೈನ್ (ಡೀಮ್ಡ್-ಟು-ಬಿ-ಯೂನಿವರ್ಸಿಟಿ) ಶಾಂತಾಮಣಿ ಕಲಾ ಕೇಂದ್ರವು ನ್ಯೂಸ್ ಪೇಪರ್ ಹಾಗೂ ಇತರೆ ಪೇಪರ್‌ಗಳನ್ನು ಬಳಸಿ 21 ಅಡಿ ಎತ್ತರದ ಪರಿಸರ ಸ್ನೇಹಿ ಗಣೇಶ ವಿಗ್ರಹ ತಯಾರಿಸಿದೆ. ಇದನ್ನು ಏಷ್ಯಾ ಬುಕ್ ಆ್ ರೆಕಾರ್ಡ್ಸ್‌ನಲ್ಲಿ ನೋಂದಾಯಿಸಲಾಗಿದೆ. 21 ಅಡಿ ಎತ್ತರದ ಗಣೇಶನನ್ನು ಮಾಡಲು 21 ಕೆ.ಜಿ. ಹಿಟ್ಟು ಮತ್ತು 108 ಕೆಜಿ ಪೇಪರ್ ಬಳಸಲಾಗಿದೆ. ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿ ಸೇರಿ 21 ಗಂಟೆಗಳಲ್ಲಿ ಈ ವಿಗ್ರಹ ನಿರ್ಮಿಸಿದ್ದಾರೆ.

ಪರಿಸರ ಕಾಳಜಿ:

ಜನರಲ್ಲಿ ಪರಿಸರ ಕಾಳಜಿ ಹೆಚ್ಚಿರುವಂತೆ ಕಂಡು ಬಂದಿತು. ಬಹುತೇಕರು ಮಣ್ಣಿನ ಗಣಪತಿ ಮೂತಿಗಳನ್ನು ಇಟ್ಟು ಪೂಜೆ ಸಲ್ಲಿಸಿದರು. ಇನ್ನೂ ಕೆಲವರು ಪರಿಸರ ಸ್ನೇಹಿ ಬಣ್ಣಗಳಿಂದ ತಯಾರಿಸಿದ್ದ ಮೂರ್ತಿಯನ್ನು ಪೂಜಿಸಿದರು. ಈ ಬಾರಿ ಪಿಒಪಿ ಮೂರ್ತಿಗಳ ಸಂಖ್ಯೆ ಬಹುತೇಕ ಕ್ಷೀಣಿಸಿತ್ತು. ಬಿ.ಪ್ಯಾಕ್, ಬಿ.ಕ್ಲಿಪ್ ಸೇರಿ ಕೆಲ ಸಂಘಸಂಸ್ಥೆಗಳು ಮನೆಯಲ್ಲಿ ಮಣ್ಣಿನ ಗಣಪ ಮೂರ್ತಿ ತುಯಾರಿಸುವ ಕಾರ್ಯಾಗಾರಗಳನ್ನು ನಡೆಸಿದ್ದರಿಂದ ಬಹಳಷ್ಟು ಮಕ್ಕಳು ಸ್ವತಃ ಮಣ್ಣಿನಿಂದ ಹಾಗೂ ಅರಿಶಿನದಿಂದ ತಯಾರಿಸಿದ ವಿಗ್ರಹಗಳನ್ನಿಟ್ಟು ಪೂಜಿಸಿದ್ದು ವಿಶೇಷವಾಗಿತ್ತು.

ಮನೆಯಲ್ಲೂ ಸಂಭ್ರಮ:

ಹಬ್ಬದ ಪ್ರಯುಕ್ತ ಮುಂಜಾನೆಯೇ ಎದ್ದು ಮಡಿಯುಟ್ಟ ಹೆಂಗೆಳೆಯರು ಮನೆ ಬಾಗಿಲಿಗೆ ಬಣ್ಣ ಬಣ್ಣಗಳಿಂದ ತುಂಬಿದ ಚಂದದ ರಂಗವಲ್ಲಿ ಹಾಕಿ, ತಳಿರು ತೋರಣಗಳನ್ನುಕಟ್ಟಿ ಸಿಂಗರಿಸಿದರು. ಹಲವರು ಮನೆಯಲ್ಲಿ ಅಂದದ ಮಂಟಪದಲ್ಲಿ ಗೌರಿ ಹಾಗೂ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಹೂಗಳಿಂದ ಅಲಂಕರಿಸಿ ಹಣ್ಣುಗಳನ್ನಿಟ್ಟು ಪೂಜೆ ನೆರವೇರಿಸಿದರು. ವಿವಿಧ ಖಾದ್ಯಗಳನ್ನು ಸಿದ್ಧಪಡಿಸಿ ದೇವರಿಗೆ ನೈವೇದ್ಯ ಮಾಡಿದರು.

ಮಹಿಳೆಯರು ತವರಿನಿಂದ ಬಂದ ಬಾಗಿನವನ್ನು ದೇವರ ಮುಂದಿಟ್ಟು ಪೂಜಿಸಿ ಮುತ್ತೈದೆಯರಿಗೆ ಅರಿಶಿನ ಕುಂಕುಮ ನೀಡಿದರು. ಗಣಪನಿಗೆ ಕಡುಬಿನ ಹಾರ, ಖರ್ಜಿಕಾಯಿ ಹಾರ, ಮೋದಕ, ಲಡ್ಡು, ರವೆ ಉಂಟೆ, ಚಕ್ಕುಲಿ ಇತ್ಯಾದಿ ಖಾದ್ಯಗಳನ್ನು ಅರ್ಪಿಸಿದರು. ಕುಟುಂಬದವರೊಂದಿಗೆ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು.ನಂತರ ಹೋಳಿಗೆ ಸೇರಿದಂತೆ ಬಗೆ ಬಗೆಯ ಅಡುಗೆ ಸಿದ್ದಪಡಿಸಿ ಮನೆಯವರೊಟ್ಟಿಗೆ ಉಂಡು ಸಂಭ್ರಮದಿಂದ ಹಬ್ಬ ಆಚರಿಸಿದರು.