ಜಿಲ್ಲೆ

ಗೌರಿ ಗಣೇಶ ಹಬ್ಬಕ್ಕೆ ಹೂವಿನ ದರದಲ್ಲಿ ಭಾರಿ ಇಳಿಕೆ

ಪಂಕಜ ಕೆ.ಎಂ.

ಬೆಂಗಳೂರು: ಗೌರಿ-ಗಣೇಶ ಹಬ್ಬಕ್ಕೆ ಎರಡು ದಿನ ಮುಂಚಿತವಾಗಿಯೇ ಖರೀದಿ ಆರಂಭವಾಗಿದ್ದು, ಶನಿವಾರ ಕೆ.ಆರ್. ಮಾರುಕಟ್ಟೆ, ಮಲ್ಲೇಶ್ವರ, ಯಶವಂತಪುರ, ಮಡಿವಾಳ ಸೇರಿ ಪ್ರಮುಖ ಮಾರುಕಟ್ಟೆಗಳಲ್ಲಿ ವ್ಯಾಪಾರ ಬಿರುಸಾಗಿ ಸಾಗಿತ್ತು. ಈ ಬಾರಿ ಹೂವು ಹಾಗೂ ಹಣ್ಣಿನ ದರ ಇಳಿಕೆಯಾಗಿರುವುದರಿಂದ ಗ್ರಾಹಕರು ಹೆಚ್ಚಿನ ಪ್ರಮಾಣದಲ್ಲೇ ಹೂ ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಸಾಮಾನ್ಯವಾಗಿ ಹಬ್ಬಗಳು ಬಂದರೆ ವಾರಕ್ಕೂ ಮುನ್ನವೇ ಹೂವಿನ ಬೆಲೆಗಳು ಗಗನಕ್ಕೇರಿ, ವ್ಯಾಪಾರ ಗರಿಗೆದರುತ್ತಿತ್ತು. ಆದರೆ ಬೆಳೆ ಇಳಿಕೆಯಿಂದಾಗಿ ವ್ಯಾಪಾರಿಗಳಲ್ಲಿ ಅಂತಹ ಉತ್ಸಾಹ ಕಾಣಿಸುತ್ತಿಲ್ಲ. ಕೆ.ಆರ್. ಮಾರುಕಟ್ಟೆಯಲ್ಲಿ ಸೇವಂತಿಗೆ ಹೂವು ಕೆ.ಜಿ.ಗೆ 20-30 ರೂ.ಗೆ ಇಳಿಕೆಯಾಗಿದೆ. ಗುಣಮಟ್ಟದ ಹೂವು ಕೆ.ಜಿ.ಗೆ 40 ರೂ. ಇದೆ. ಚೆಂಡು ಹೂವನ್ನು ಕೇಳುವವರೇ ಇಲ್ಲದಂತಾಗಿದೆ. ಹೀಗಿದ್ದರೂ, ಚಿಲ್ಲರೆ ಮಾರಾಟಗಾರರು ಸೇವಂತಿಗೆ ಹೂಗಳನ್ನು ಕೆ.ಜಿ.ಗೆ 100 ರೂ.ಗೆ ಮಾರುತ್ತಿದ್ದಾರೆ.

ಈ ಬಾರಿ ಹೆಚ್ಚಿನ ರೈತರು ವರಮಹಾಲಕ್ಷ್ಮೀ ಹಬ್ಬಕ್ಕೆ ಕೊಯ್ಲಿಗೆ ಬರುವಂತೆ ಹೂಗಳನ್ನು ಬೆಳೆದಿದ್ದರು. ಆದರೆ ಆಗ ಪೂರ್ಣ ಪ್ರಮಾಣದಲ್ಲಿ ಹೂವು ಬರಲಿಲ್ಲ. ಇದೀಗ ಎಲ್ಲೆಡೆ ಮಳೆ ಬೀಳುತ್ತಿರುವುದರಿಂದ ನಿರೀಕ್ಷೆಗೂ ಮೀರಿ ಹೂವಿನ ಉತ್ಪಾದನೆಯಾಗಿದೆ. ಹೀಗಾಗಿ, ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಹೂವು ಬರುತ್ತಿರುವುದರಿಂದ ಬೆಲೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ.

ಮಲ್ಲಿಗೆ ಸೀಸನ್ ಅಲ್ಲ:

ಇದು ಮಲ್ಲಿಗೆ ಹೂವು ಸೀಸನ್ ಅಗಿಲ್ಲದ ಕಾರಣ, ಇದರ ಬೆಲೆ ಸ್ವಲ್ಪ ಹೆಚ್ಚಾಗಿದೆ. ಶನಿವಾರ ಕೆ.ಜಿ. ಹೂವು 600 ರೂ. ತಲುಪಿತ್ತು. ಗುಲಾಬಿ ಹೂವು ಕೆ.ಜಿ.ಗೆ 120-150 ರೂ. ಇದೆ. ಇವುಗಳ ಹೊರತಾಗಿ ಚೆಂಡು ಹೂವು, ಕನಕಾಂಬರ ಸೇರಿ ಇತರೆ ಹೂವುಗಳ ದರದಲ್ಲಿ ಇಳಿಕೆಯಾಗಿದೆ.

ಹಣ್ಣುಗಳ ದರವೂ ಇಳಿಕೆ

ಮೂಸಂಬಿ, ಸೇಬು, ದಾಳಿಂಬೆ ಹಣ್ಣುಗಳ ದರವೂ ಗ್ರಾಹಕರಿಗೆ ಹೊರೆಯಾಗಿಲ್ಲ. ಆದರೆ ತಿಂಗಳ ಹಿಂದೆ ಏರಿಕೆಯಾಗಿದ್ದ ಬಾಳೆಹಣ್ಣಿನ ಬೆಲೆ ಇನ್ನೂ ಇಳಿಕೆ ಕಂಡಿಲ್ಲ. ಏಲಕ್ಕಿ ಬಾಳೆ ಕೆ.ಜಿ.ಗೆ 90-110 ರೂ.ನಂತೆ ಮಾರಾಟವಾಗುತ್ತಿದೆ. ಮೂಸಂಬಿ ಕೆ.ಜಿ.ಗೆ 70 ರೂ., ದಾಳಿಂಬೆ 150 ರೂ., ಸೇಬು 120-150 ರೂ. ಇದೆ. ಸೀಬೆ ಹಣ್ಣು ದರ ಕೆ.ಜಿ.ಗೆ 50 ರೂ. ಇದೆ.

ಕೆ.ಆರ್. ಮಾರುಕಟ್ಟೆ ಹೂವು (ಕೆ.ಜಿ.ಗಳಲ್ಲಿ)

ಮಲ್ಲಿಗೆ 400- 600 ರೂ.

ಕನಕಾಂಬರ 500 ರೂ.

ಗುಲಾಬಿ 120-150

ಸುಗಂಧರಾಜ 120-140 ರೂ.

ಸೇವಂತಿಗೆ 30-40 ರೂ.

ಚೆಂಡು ಹೂವು 10-20 ರೂ.