ಜಿಲ್ಲೆ

ವಿರಾಜಪೇಟೆಯಲ್ಲಿ ಗೌಡ ಸಮಾಜ ನಿರ್ಮಾಣಕ್ಕೆ ಜಾಗ ದಾನ

ಸುನಿಲ್ ಪೊನ್ನೇಟಿ

ಮಡಿಕೇರಿ:

ವಿರಾಜಪೇಟೆಯಲ್ಲಿ ಬಹುನಿರೀಕ್ಷಿತ ಗೌಡ ಸಮಾಜ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕಾಗಿ ಸುಳ್ಯದ ಕುರುಂಜಿ ವೆಂಕಟರಮಣ ಗೌಡರ ಕುಟುಂಬಸ್ಥರು ಸುಮಾರು 3.5 ಕೋಟಿ ರೂ. ಬೆಲೆಬಾಳುವ ಜಾಗವನ್ನು ದಾನವಾಗಿ ಕೊಟ್ಟಿದ್ದಾರೆ ಎಂದು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕರಂದ್ಲಾಜೆ ಆನಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿರಾಜಪೇಟೆಯಲ್ಲಿ ಗೌಡ ಸಮಾಜದ ಅಗತ್ಯತೆ ಹಿನ್ನೆಲೆಯಲ್ಲಿ ಕುರುಂಜಿ ವೆಂಕಟರಮಣ ಗೌಡ ಅವರು 2004ರಲ್ಲಿ 22 ಲಕ್ಷ ರೂ.ಗೆ 77 ಸೆಂಟ್ ಜಾಗವನ್ನು ಮಕ್ಕಳಾದ ಡಾ. ಕೆ.ವಿ. ಚಿದಾನಂದ ಮತ್ತು ಡಾ. ರೇಣುಕಾ ಪ್ರಸಾದ್ ಹೆಸರಿನಲ್ಲಿ ಖರೀದಿಸಿದ್ದರು. ಆದರೆ ಕಳೆದ 21 ವರ್ಷಗಳಿಂದ ಕಾರಣಾಂತರಗಳಿAದ ಈ ಜಾಗ ವರ್ಗಾವಣೆ ಆಗಿರಲಿಲ್ಲ. ಕೊಡಗು ಗೌಡ ಸಮಾಜಗಳ ಒಕ್ಕೂಟದ ನೂತನ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದ ನಂತರ ಜಾಗ ಹಸ್ತಾಂತರ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು.

ಚಿದಾನಂದ ಅವರ ಪರವಾಗಿ ಅವರ ಪುತ್ರ ಕೆ.ಸಿ. ಅಕ್ಷಯ್ ಮತ್ತು ರೇಣುಕಾ ಪ್ರಸಾದ್ ಪರವಾಗಿ ಪುತ್ರ ಕೆ.ಆರ್. ಮೌರ್ಯ ಮಡಿಕೇರಿ ನೋಂದಣಿ ಕಚೇರಿಗೆ ಆಗಮಿಸಿ ಅಂದಾಜು 3.50 ಕೋಟಿ ರೂ. ಮೌಲ್ಯದ ಜಾಗವನ್ನು ಈಚೆಗೆ ವಿರಾಜಪೇಟೆ ಗೌಡ ಸಮಾಜದ ಅಧ್ಯಕ್ಷ ಮುಕ್ಕಾಟಿ ವಾಸು ಗಣಪತಿ ಹೆಸರಿಗೆ ದಾನಪತ್ರ ಬರೆದು ಹಸ್ತಾಂತರಿಸಿದ್ದಾರೆ.

ಈ ಸಂದರ್ಭ ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ್ ಕರಂದ್ಲಾಜೆ, ಉಪಾಧ್ಯಕ್ಷ ತೇನನ ರಾಜೇಶ್, ಕಾರ್ಯದರ್ಶಿ ಪೇರಿಯನ ಉದಯ, ಕಾನೂನು ಸಲಹೆಗಾರ ಕೊಂಬಾರನ ರೋಷನ್, ಕೊಡಗು ಗೌಡ ವಿದ್ಯಾ ಸಂಘದ ಅಧ್ಯಕ್ಷ ಅಂಬೇಕಲ್ ನವೀನ್, ಕುಶಾಲನಗರ ಗೌಡ ಸಮಾಜದ ಅಧ್ಯಕ್ಷ ಚಿಲ್ಲನ ಗಣಿಪ್ರಸಾದ್ ಸೇರಿದಂತೆ ಸಮಾಜದ ಪ್ರಮುಖರು ಇದ್ದರು ಎಂದು ಹೇಳಿದ್ದಾರೆ.