ಜಿಲ್ಲೆ

ಏ.೨೦ರಿಂದ ಗೌಡ ಪ್ರೀಮಿಯರ್ ಲೀಗ್

ಆದರ್ಶ್. ಎಂ.ಕೆ.

ಮಡಿಕೇರಿ: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಏ.೨೦ ರಿಂದ ಮೇ೪ರ ವರೆಗೆ ಮಡಿಕೇರಿಯ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಪಿಎಲ್ ಗೌಡ ಪ್ರೀಮಿಯರ್ ಲೀಗ್ ಲೆದರ್ ಬಾಲ್ ಟಿ-೨೦ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ ಎಂದು ಕೊಡಗು ಗೌಡ ಯುವ ವೇದಿಕೆ ಶಿಸ್ತು ಸಮಿತಿ ಅಧ್ಯಕ್ಷ ನವೀನ್ ದೇರಳ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಗೌಡ ಯುವ ವೇದಿಕೆ ಕಳೆದ ಹಲವಾರು ವರ್ಷಗಳಿಂದ ಗೌಡ ಜನಾಂಗ ಬಾಂಧವರಿಗೆ ಕ್ರೀಡಾಕೂಟ ಮತ್ತು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ೨೦೨೫ರ ಸೀಸನ್-೦೩ ರಲ್ಲಿ ಕಳೆದ ಬಾರಿಯ ದಿ ಎಲೈಟ್ ಎ ಮತ್ತು ಬಿ, ಜಿ ಕಿಂಗ್ ಸಿದ್ದಲಿಂಗಪುರ, ಕಾಫಿ ಕ್ರಿಕೆಟರ್ರ್ಸ್‌ ಮಡಿಕೇರಿ, ಕೂರ್ಗ್ ಹಾಕ್ಸ್ ಮಡಿಕೇರಿ, ಎಂಸಿಸಿ ಮಡಿಕೇರಿ, ಪ್ಲೆಂಟರ್ರ್ಸ್‌ ಕ್ಲಬ್ ಬಿಳಿಗೇರಿ ಭಾಗವಹಿಸಲಿದ್ದು, ಈ ಬಾರಿ ಲಾ ಕಗ್ಗೊಡ್ಲು, ಕೊಡಗು ಜಿಲ್ಲಾ ಒಕ್ಕಲಿಗರ ಯುವ ವೇದಿಕೆ, ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಕೆವಿಜಿ ವಿದ್ಯಾಸಂಸ್ಥೆಯ ಅಮರ ಸುಳ್ಯ ರಾಯಲ್ಸ್ ತಂಡ ಸೇರಿದಂತೆ ಒಟ್ಟು ೧೦ ಫ್ರಾಂಚೈಸಿಗಳು ಪಾಲ್ಗೊಂಡು ಆಟಗಾರರನ್ನು ಬಿಡ್ಡಿಂಗ್ ಮುಖಾಂತರ ಈಗಾಗಲೇ ಖರೀದಿ ಮಾಡಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪಂದ್ಯಾವಳಿಯ ವಿಜೇತರಿಗೆ ಪ್ರಥಮ ಬಹುಮಾನ ರೂ.೧,೨೫,೦೦೦, ದ್ವಿತೀಯ ರೂ.೭೫,೦೦೦, ತೃತೀಯ ಬಹುಮಾನ ರೂ.೪೫,೦೦೦ ನಗದು ಮತ್ತು ಕಳೆದ ಸೀಸನ್‌ನಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಿಡುಗಡೆ ಮಾಡಿದ ಗೌಡ ಸಂಸ್ಕೃತಿ ಮತ್ತು ಬಲಿದಾನದ ಪ್ರತೀಕವಾದ ಆಕರ್ಷಕ ಟ್ರೋಫಿ ಹಾಗೂ ಹಲವಾರು ವೈಯಕ್ತಿಕ ಬಹುಮಾನಗಳನ್ನು ನೀಡಲಾಗುವುದು ಎಂದು ತಿಳಿಸಿದರು.

ಕಳೆದ ಎರಡು ವರ್ಷದ ಲೆದರ್ ಬಾಲ್ ಕ್ರೀಡಾಕೂಟಕ್ಕಿಂತ ಈ ಬಾರಿ ವಿಜ್ರಂಭಣೆಯಿಂದ ಪಂದ್ಯಾವಳಿಯನ್ನು ನಡೆಸಲು ತೀರ್ಮಾನಿಸಲಾಗಿದೆ. ಕ್ರೀಡಾಕೂಟದಲ್ಲಿ ಜನಾಂಗದ ಸಂಸ್ಕೃತಿಯನ್ನು ಬಿಂಬಿಸುವ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು, ಯುವ ಪೀಳಿಗೆಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳು ನಡೆಯಲಿವೆ ಎಂದ ಅವರು, ಒಕ್ಕಲಿಗ ಜನಾಂಗದ ಕ್ರೀಡಾಕೂಟಕ್ಕೆ ಸರಕಾರದಿಂದ ಅನುದಾನ ಬಿಡುಗಡೆ ಮಾಡುವ ಮೂಲಕ ಜನಾಂಗದ ಅಭಿವೃದ್ಧಿಗೆ ಸಹಕರಿಸುವಂತೆ ಈಗಾಗಲೇ ಮಡಿಕೇರಿ ಮತ್ತು ವಿರಾಜಪೇಟೆ ಶಾಸಕರಿಗೆ ಮನವಿ ಸಲ್ಲಿಸಲಾಗಿದ್ದು, ಸುಮಾರು ೧ ಕೋಟಿಯಷ್ಟು ಅನುದಾನ ಬರುವ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿದರು.

ಕೊಡಗು ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಷನ್‌ನ ಕಾರ್ಯದರ್ಶಿ ದುಗ್ಗಳ ಕಪಿಲ್ ಮಾತನಾಡಿ, ಮೇ೩ ರಂದು ಕೊಡಗು ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಷನ್ ಮತ್ತು ಕೊಡಗು ಗೌಡ ಯುವ ವೇದಿಕೆ ಸಹಯೋಗದೊಂದಿಗೆ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಕುಟುಂಬವಾರು ಹೊನಲು ಬೆಳಕಿನ ಪುರುಷರ ಮುಕ್ತ ಮಡ್ ಕಬಡ್ಡಿ ಪೈಪೋಟಿ ನಡೆಯಲಿದೆ. ಪಂದ್ಯಾವಳಿಯ ಪ್ರಥಮ ವಿಜೇತ ತಂಡಕ್ಕೆ ರೂ.೨೫ ಸಾವಿರ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ೧೫ ಸಾವಿರ ಹಾಗೂ ತೃತೀಯ ಸ್ಥಾನ ಪಡೆದ ತಂಡಕ್ಕೆ ೧೦ ಸಾವಿರ ನಗದು ಬಹುಮಾನ ಸೇರಿದಂತೆ ಆಕರ್ಷಕ ಟ್ರೋಫಿ ನೀಡಲಾಗುವುದು. ಮೊದಲು ಬಂದ ೩೨ ತಂಡಗಳಿಗೆ ಆದ್ಯತೆ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಹಾಗೂ ನೋಂದಣಿಗಾಗಿ ೯೭೩೧೦೦೯೮೪೧, ೯೯೭೨೩೭೬೧೫೧ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.

ಕೊಡಗು-ದಕ್ಷಿಣ ಕನ್ನಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಮೂಟೇರ ಪುಷ್ಪಾವತಿ ರಮೇಶ್ ಮಾತನಾಡಿ, ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಮಹಿಳಾ ಒಕ್ಕೂಟದ ವತಿಯಿಂದ ಮೇ.೩ ಹಾಗೂ ೪ ರಂದು ಕ್ರಿಕೆಟ್ ಪಂದ್ಯಾವಳಿಯನ್ನು ಕೊಡಗು ಗೌಡ ಯುವ ವೇದಿಕೆಯ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗಿದೆ. ಗೌಡ ಮಹಿಳಾ ತಂಡಗಳಿಗೆ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಮುಕ್ತ ಅವಕಾಶವಿದ್ದು, ಪ್ರಥಮ ಬಹುಮಾನ ರೂ.೨೫ ಸಾವಿರ, ದ್ವಿತೀಯ ಬಹುಮಾನ ೧೫ ಸಾವಿರ ಹಾಗೂ ತೃತೀಯ ಬಹುಮಾನ ೧೦ ಸಾವಿರ ರೂ. ನಗದು ಬಹುಮಾನ ಸೇರಿದಂತೆ ಆಕರ್ಷಕ ಟ್ರೋಫಿ ಮತ್ತು ವೈಯುಕ್ತಿಕ ಬಹುಮಾನಗಳನ್ನು ಕೂಡ ನೀಡಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ, ಉಪಾಧ್ಯಕ್ಷ ಬಾಲಡಿ ಮನೋಜ್, ಕೊಡಗು-ದಕ್ಷಿಣ ಕನ್ನಡ ಮಹಿಳಾ ಒಕ್ಕೂಟದ ಸಂಸ್ಥಾಪಕ ಸಂಚಾಲಕಿ ಪುದಿಯನೆರವನ ರೇವತಿ ರಮೇಶ್ ಉಪಸ್ಥಿತರಿದ್ದರು.