ರಾಯಚೂರು ಕೃಷಿ ವಿಜ್ಞಾನಗಳ ವಿವಿಯ ಆಡಳಿತ ಮಂಡಳಿ ಕಚೇರಿಯ ಹೊರನೋಟ. 
ಜಿಲ್ಲೆ

ಕೃಷಿ ವಿಜ್ಞಾನ ವಿವಿಯಿಂದ ಗೌಡಾ ಪ್ರದಾನ

ರಾಯಚೂರು: ಸ್ಥಳೀಯ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸ್ಥಾಪನೆಗೊಂಡ 15 ವರ್ಷಗಳ ನಂತರ ಪ್ರಸಕ್ತ ವರ್ಷದಿಂದ ಕೃಷಿ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ವಿವಿ ವ್ಯಾಪ್ತಿಯ ಜಿಲ್ಲೆಗಳಲ್ಲಿನ ಸಾಧಕರಿಗೆ ಗೌರವ ಡಾಕ್ಟರೇಟ್ ನೀಡಲು ಮುಂದಾಗಿದೆ.
ರಾಜ್ಯದಲ್ಲಿನ ಕೃಷಿ, ತೋಟಗಾರಿಕೆ ಸೇರಿದಂತೆ ಇನ್ನಿತರ ವಿವಿಗಳು ಈಗಾಗಲೇ ಪ್ರತಿ ವರ್ಷ ಸಾಧಕರಿಗೆ ಗೌರವ ಡಾಕ್ಟರೇಟ್ ನೀಡುತ್ತಾ ಬಂದಿವೆ. ಆದರೆ ರಾಯಚೂರು ಕೃಷಿ ವಿಜ್ಞಾನಗಳ ವಿವಿ ಗೌರವ ನೀಡಲು ಮುಂದಾಗಿದ್ದಿಲ್ಲ. ಆದರೆ ವಿವಿ ವ್ಯಾಪ್ತಿಯಲ್ಲಿನ ಜಿಲ್ಲೆಗಳಿಗೆ ತಲಾ ಒಬ್ಬರಂತೆ ಕೃಷಿ ಮೇಳದಲ್ಲಿ ಶ್ರೇಷ್ಠ ಕೃಷಿಕ ಹಾಗೂ ಶ್ರೇಷ್ಠ ಕೃಷಿಕ ಮಹಿಳೆ ಪ್ರಶಸ್ತಿ ನೀಡುತ್ತಾ ಬಂದಿತ್ತು.
ಈ ಬಾರಿ ವಿವಿ ವ್ಯಾಪ್ತಿಯಲ್ಲಿನ ರಾಯಚೂರು, ಕೊಪ್ಪಳ, ಬಳ್ಳಾರಿ, ಯಾದಗಿರಿ, ಕಲಬುರಗಿ, ಬೀದರ್ ಜಿಲ್ಲೆಗಳಲ್ಲಿನ ಕೃಷಿ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದವರನ್ನು ಗುರುತಿಸಿ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಲಾಗಿದೆ. ೆ.29ರಂದು ನಡೆಯುವ ವಿವಿ ಘಟಿಕೋತ್ಸವದಲ್ಲಿ ಮೊದಲ ಬಾರಿಗೆ ವಿವಿಯಿಂದ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತಿದೆ.
ಹಲವು ವಿವಿಗಳು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದವರನ್ನು ಗುರುತಿಸಿ ಗೌರವ ಡಾಕ್ಟರೇಟ್ ನೀಡುತ್ತಾ ಬಂದಿವೆ. ಬೆಂಗಳೂರು, ಧಾರವಾಡ ಕೃಷಿ ವಿವಿಗಳು ಕೂಡಾ ಕೃಷಿ ಕ್ಷೇತ್ರದ ಜತೆಗೆ ಇನ್ನಿತರರಿಗೆ ಗೌರವ ಡಾಕ್ಟರೇಟ್ ಪದವಿ ನೀಡುತ್ತಿದ್ದು, ರಾಯಚೂರು ಕೃಷಿ ವಿಜ್ಞಾನಗಳ ವಿವಿ ಕೃಷಿ ಕ್ಷೇತ್ರದಲ್ಲಿನ ಸಾಧಕರಿಗೆ ಮಾತ್ರ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಿದೆ.

  • ಆಯ್ಕೆ ಸಮಿತಿ ರಚನೆ: ಮೊದಲ ಬಾರಿಗೆ ಗೌರವ ಡಾಕ್ಟರೇಟ್ ಪದವಿ ನೀಡಲು ಮುಂದಾಗಿರುವ ರಾಯಚೂರು ಕೃಷಿ ವಿಜ್ಞಾನಗಳ ವಿವಿ ಆಡಳಿತ ಮಂಡಳಿ ಕೃಷಿ ಕ್ಷೇತ್ರದಲ್ಲಿನ ಸಾಧಕರನ್ನು ಗುರುತಿಸಲು ಆಯ್ಕೆ ಸಮಿತಿಯನ್ನು ರಚಿಸಿದೆ. ವಿವಿ ಕುಲಪತಿ ಡಾ.ಎಂ.ಹನುಮಂತಪ್ಪ ಸೇರಿದಂತೆ ಹಲವರು ಸಮಿತಿಯಲ್ಲಿದ್ದು, ಸಮಿತಿ ಮೂವರು ಹೆಸರನ್ನು ಅಂತಿಮಗೊಳಿಸಿ ರಾಜ್ಯಪಾಲರ ಕಚೇರಿಗೆ ಕಳುಹಿಸಲಿದೆ. ರಾಜ್ಯಪಾಲರು ಒಬ್ಬರ ಹೆಸರನ್ನು ಆಯ್ಕೆ ಮಾಡಲಿದ್ದು, ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ ಎಂದು ವಿವಿ ಮೂಲಗಳು ತಿಳಿಸಿವೆ.

ವಿವಿ ಪ್ರಸಕ್ತ ವರ್ಷದಿಂದ ಗೌರವ ಡಾಕ್ಟರೇಟ್ ನೀಡಲು ಚಿಂತನೆ ನಡೆಸಿದ್ದು, ಅದಕ್ಕಾಗಿ ಆಯ್ಕೆ ಸಮಿತಿಯನ್ನು ರಚಿಸಲಾಗಿದೆ. ಸಮಿತಿ ಮೂರ‌್ನಾಲ್ಕು ಹೆಸರುಗಳನ್ನು ಸೂಚಿಸಿದ ನಂತರ ಅವುಗಳನ್ನು ರಾಜ್ಯಪಾಲರ ಕಚೇರಿಗೆ ಕಳುಹಿಸಿ ಒಪ್ಪಿಗೆ ಪಡೆದು ಘಟಿಕೋತ್ಸವದಲ್ಲಿ ಪ್ರದಾನ ಮಾಡಲಾಗುತ್ತಿದೆ.

  • ಡಾ.ಎಂ.ವೀರನಗೌಡ, ಕುಲಸಚಿವ, ಕೃಷಿ ವಿಜ್ಞಾನಗಳ ವಿವಿ, ರಾಯಚೂರು.