ಮೂಡಿಗೆರೆ: ಮಣಿಪುರದಲ್ಲಿ ದೌರ್ಜನ್ಯಕ್ಕೊಳಗಾದ ಕುಕಿ ಜನಾಂಗದವರನ್ನು ರಕ್ಷಿಸಬೇಕಾದ ಅಲ್ಲಿನ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಗಲಭೆಕೋರರಿಗೆ ಕುಮ್ಮಕ್ಕು ನೀಡುವ ರೀತಿಯಲ್ಲಿ ವರ್ತಿಸುತ್ತಿವೆ. ಸರ್ಕಾರಗಳ ಧೋರಣೆ ಅಪಾಯಕಾರಿಯಾಗಿದೆ ಎಂದು ಮಂಗಳೂರಿನ ಮಾಜಿ ಶಾಸಕ ಜೆ.ಆರ್.ಲೋಬೋ ಆತಂಕ ವ್ಯಕ್ತಪಡಿಸಿದರು.
ಮಣಿಪುರ ಹಿಂಸಾಚಾರ ಖಂಡಿಸಿ ಶುಕ್ರವಾರ ನಡೆಸಿದ ಸಮಾನ ಮನಸ್ಕರ ಪ್ರತಿಭಟನೆಯಲ್ಲಿ ಮಾತನಾಡಿ, ಕೆಲ ಮತಿಗೆಟ್ಟ ರಾಜಕಾರಣಿಗಳು ಜನರ ವಿರುದ್ಧ ಸಮರ ಸಾರುತ್ತಿದ್ದಾರೆ. ಮಣಿಪುರ ಸರ್ಕಾರ ಗಲಭೆಕೋರರ ಪರವಾಗಿ ನಿಂತಿದೆ. ಅಲ್ಲಿನ ಕುಕಿ ಬುಡಕಟ್ಟು ಸಮುದಾಯದ ಜನರನ್ನು ಹತ್ಯೆ ಮಾಡಲಾಗಿದೆ. ಮಹಿಳೆಯರ ಮೇಲೆ ಅತ್ಯಾಚಾರ ನಡೆಸಲಾಗಿದೆ. ಇಂಥ ಕ್ರೂರಿಗಳನ್ನು ಸದೆಬಡಿಯಬೇಕಾದ ಸರ್ಕಾರಗಳು ಕುರುಡರಂತೆ ವರ್ತಿಸುತ್ತಿವೆ. ಕೇಂದ್ರ ಸರ್ಕಾರ ಮಣಿಪುರ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿ ಲಯನ್ಸ್ ವೃತ್ತದಲ್ಲಿ ಸಮಾವೇಶಗೊಂಡು ನಂತರ ತಾಲೂಕು ಕಚೇರಿಗೆ ಮೆರವಣಿಗೆಯಲ್ಲಿ ತೆರಳಿ ತಹಸೀಲಾರ್ ಶಿವಶರಣಪ್ಪ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ಮಾಜಿ ಸಚಿವ ಬಿ.ಬಿ.ನಿಂಗಯ್ಯ, ವಿವಿಧ ಚರ್ಚ್ ಧರ್ಮ ಗುರುಗಳಾದ ಸುನಿಲ್ ರೋಡ್ರಿಗ್ರಸ್, ವೆಲಂಗಣಿ ಜೋನಿ, ಪೀಟರ್ ಬ್ರಾಂಕ್, ಜೇಮ್ಸ್ ಚಾರ್ಲಿ, ಡೇವಿಡ್ ಪ್ರಕಾಶ್, ಲ್ಯಾನ್ಸಿ ಪಿಂಟೋ, ಪ್ರೇಮ್ ಲಾರೆನ್ಸ್ ಡಿಸೋಜ, ಜಿಪಂ ಮಾಜಿ ಅಧ್ಯಕ್ಷ ಕೆ.ಮಹಮ್ಮದ್, ಸಂಯುಕ್ತ ಜಮಾತ್ ಒಕ್ಕೂಟದ ಅಧ್ಯಕ್ಷ ಸಿ.ಕೆ.ಇಬ್ರಾಹಿಂ, ಕಾರ್ಯದರ್ಶಿ ಎ.ಸಿ.ಅಯ್ಯೂಬ್ ಹಾಜಿ, ಸಿಪಿಐಎಂಎಲ್ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಟಿ.ಕೆ.ಸುಧೀರ್, ಎಂ.ಎಲ್.ಮೂರ್ತಿ, ಕೆಜಿಎಫ್ ಮಾಜಿ ಅಧ್ಯಕ್ಷ ಬಿ.ಎಸ್.ಜಯರಾಂ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ.ಸುರೇಂದ್ರ, ಬಿಎಸ್ಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಲೋಕವಳ್ಳಿ ರಮೇಶ್, ಎಸ್‌ಡಿಪಿಐ ಕ್ಷೇತ್ರ ಸಮಿತಿ ಅಧ್ಯಕ್ಷ ಅಂಗಡಿ ಚಂದ್ರು, ಮುಖಂಡರಾದ ಬಸ್ಕಲ್ ವಿನ್ಸಿ, ಝಕರಿಯಾ ಜಾಕೀರ್ ಇತರರಿದ್ದರು.
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಹಿಂಸಾಚಾರ ಹೆಚ್ಚುತ್ತಿದೆ. ಮಹಿಳೆಯರ ಮೇಲೆ ಅತ್ಯಾಚಾರ, ಸುಲಿಗೆ, ಮನೆ ಹಾಗೂ ಪ್ರಾರ್ಥನಾ ಮಂದಿರಗಳ ನೆಲಸಮ ಹೆಚ್ಚಾಗುತ್ತಿದೆ. ಮಣಿಪುರದಲ್ಲಿ ಮನೆ, ಪ್ರಾರ್ಥನಾ ಮಂದಿರಗಳನ್ನು ಸುಡಲಾಗಿದೆ. ಮಾಜಿ ಸೈನಿಕರೊಬ್ಬರ ಪತ್ನಿ ಸೇರಿದಂತೆ ಇಬ್ಬರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಹತ್ಯೆ ಮಾಡಲಾಗಿದೆ. ಇದು ದೇಶವೇ ತಲೆತಗ್ಗಿಸಬೇಕಾದ ಘಟನೆಯಾಗಿದ್ದರೂ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾತ್ರ ಏನೂ ನಡೆದಿಲ್ಲವೆಂಬಂತೆ ಇದ್ದಾರೆ ಎಂದು ಮಾಜಿ ಸಚಿವೆ ಮೋಟಮ್ಮ ಆಕ್ರೋಶ ವ್ಯಕ್ತಪಡಿಸಿದರು.