ಮಂಜುನಾಥ ಟಿ.ಭೋವಿ ಮೈಸೂರು
ಬಹುತೇಕ ಕನ್ನಡ ಶಾಲೆಗಳಿಗೆ ಸ್ಥಳೀಯರೇ ಜೀವಾಳ. ಆದರೆ, ಇಲ್ಲೊಂದು ಶಾಲೆಗೆ ಅನ್ಯರಾಜ್ಯದ ಮಕ್ಕಳೇ ಆಧಾರ. ವಿವಿಧ ಪ್ರಾದೇಶಿಕ ಭಾಷೆಗಳ ವಿದ್ಯಾರ್ಥಿಗಳು ಇಲ್ಲಿ ಕಲಿಯುವ ಮಾಧ್ಯಮ ಒಂದೇ. ಅದುವೇ ಹಿಂದಿ. ಈ ರೀತಿ ವೈಶಿಷ್ಟೃತೆ ಇರುವ ಶಾಲೆ ಯಾವುದು ಎನ್ನುತ್ತೀರಾ? ಅದುವೇ ನಜರ್‌ಬಾದ್‌ನಲ್ಲಿರುವ ಸರ್ಕಾರಿ ಸಿಂಧಿ ಹಿರಿಯ ಪ್ರಾಥಮಿಕ ಶಾಲೆ..!
ಜಿಲ್ಲೆಯಲ್ಲಿ ಇರುವ ಏಕೈಕ ಸರ್ಕಾರಿ ಹಿಂದಿ ಮಾಧ್ಯಮ ಶಾಲೆ ಇದು. ಕರುನಾಡಿನಲ್ಲಿ ಹಿಂದಿ ಭಾಷೆಯಲ್ಲಿ ಕಲಿಸುತ್ತಿರುವ ವಿರಳಾತಿ ವಿರಳ ಶಾಲೆಗಳಲ್ಲಿ ಇದೂ ಒಂದು. ಇಂತಹ ಹಿರಿಮೆ-ಗರಿಮೆ ಹೊಂದಿರುವ ಈ ಶಾಲೆ 73 ವರ್ಷ ಪೂರೈಸಿದೆ. ಇಲ್ಲಿ ಕನ್ನಡದ ಮಕ್ಕಳು ಓದಲ್ಲ, ಉರ್ದು ಮಾತನಾಡುವ ಸ್ಥಳೀಯ ವಿದ್ಯಾರ್ಥಿಗಳೂ ಇಲ್ಲಿಲ್ಲ. ಇರುವುದು ಹೊರ ರಾಜ್ಯಗಳ ಮಕ್ಕಳು ಮಾತ್ರ ಎಂಬುದು ವಿಶೇಷ.
ಹಿಂದೆ ವಿದೇಶಿಯರೂ ಇದ್ದರು:
1ರಿಂದ 7ನೇ ತರಗತಿ ವರೆಗೆ ಇರುವ ಈ ಜ್ಞಾನದೇಗುಲ ಒಂದು ಕಾಲದಲ್ಲಿ ಮಿನಿ ಭಾರತದಂತೆ ಗೋಚರವಾಗುತ್ತಿತ್ತು. ಉತ್ತರ ಭಾರತದ ಅನೇಕ ರಾಜ್ಯಗಳ ಮಕ್ಕಳು ಇಲ್ಲಿ ಅಭ್ಯಾಸ ಮಾಡುತ್ತಿದ್ದರು. ಇದರೊಂದಿಗೆ ನೇಪಾಳ, ಮಧ್ಯಪ್ರಾಚ್ಯದ ಮಕ್ಕಳು ಇಲ್ಲಿ ಕಲಿಯುತ್ತಿದ್ದರು. ಆದರೀಗ ಇಲ್ಲ. ಈಗ ಉತ್ತರಪ್ರದೇಶ, ಮಹಾರಾಷ್ಟ್ರ, ಬಿಹಾರ ರಾಜ್ಯದ ಮಕ್ಕಳೂ ಇದ್ದಾರೆ. ಈ ಪೈಕಿ ರಾಜಸ್ಥಾನ ಮೂಲದ ಮಕ್ಕಳ ಸಂಖ್ಯೆ ಅಧಿಕ.
ಇದು ಪಕ್ಕಾ ಹಿಂದಿ ಸ್ಕೂಲ್:
1948ರಲ್ಲಿ ಆರಂಭವಾದ ಈ ಶಾಲೆ ಮಹಾರಾಜರ ಕೊಡುಗೆ. ಇದು ಮೊದಲು ಕನ್ನಡ ಮಾಧ್ಯಮ ಶಾಲೆಯಾಗಿತ್ತು. ರಾಜಸ್ಥಾನ ಮೂಲದ ಸಿಂಧಿ ಸಮುದಾಯದ 7-8 ಕುಟುಂಬಗಳ ಮಕ್ಕಳು ಕಲಿಯಲು ಒಂದು ಕೊಠಡಿಯಲ್ಲಿ ಹಿಂದಿ ಮಾಧ್ಯಮ ಬೋಧನೆ ಶುರುವಾಯಿತು. ಹೀಗಾಗಿ, ಕಾಲ ಕ್ರಮೇಣ ಇದು ‘ಸಿಂಧಿ ಶಾಲೆ’ ಎಂದು ಹೆಸರುವಾಸಿಯಾಯಿತು. ವಿದ್ಯಾರ್ಥಿಗಳ ಕೊರತೆಯಿಂದ 2002ರಲ್ಲಿ ಕನ್ನಡ ಶಾಲೆ ಮುಚ್ಚಿದ ಬಳಿಕ ಇದು ಪೂರ್ಣ ಪ್ರಮಾಣದಲ್ಲಿ ಹಿಂದಿ ಮಾಧ್ಯಮ ಶಾಲೆಯಾಗಿ ಪರಿವರ್ತನೆಗೊಂಡಿತು.
ಇಲ್ಲೂ ಮಕ್ಕಳ ಕೊರತೆ:
ಒಂದು ಕಾಲದಲ್ಲಿ ಇಲ್ಲಿ ಮಕ್ಕಳು ಗಿಜಿಗುಡುತ್ತಿದ್ದರು. 2007ರ ವರೆಗೂ ವಿದ್ಯಾರ್ಥಿಗಳ ಸಂಖ್ಯೆ 150 ದಾಟಿತ್ತು. ಆದರೀಗ ಎಲ್ಲ ಸರ್ಕಾರಿ ಶಾಲೆಗಳಂತೆ ಇಲ್ಲಿಯೂ ವಿದ್ಯಾರ್ಥಿಗಳ ಅಭಾವ ಶುರುವಾಗಿದೆ. ಇದೀಗ ಬರೀ 46 ವಿದ್ಯಾರ್ಥಿಗಳಿದ್ದು, 1ರಿಂದ 7ನೇ ತರಗತಿ ವರೆಗೆ ಕ್ರಮವಾಗಿ 2, 9, 10, 4, 5, 4, 9 ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಈ ಪೈಕಿ 31 ಹೆಣ್ಣು ಮಕ್ಕಳು, 15 ಗಂಡು ಮಕ್ಕಳಿದ್ದಾರೆ. ಮುಖ್ಯಶಿಕ್ಷಕರಾದ ಎನ್.ಚಂದ್ರಕಲಾ, ಶಿಕ್ಷಕರಾದ ಎಚ್.ವಿ.ವೇಣುಕುಮಾರಿ, ಬುಷಾ ಬಾನು, ಬಿ.ಎಂ.ರೂಪಾ ಕಾರ್ಯನಿರ್ವಹಿಸುತ್ತಿದ್ದಾರೆ. ಹೊರ ರಾಜ್ಯದ ಮಕ್ಕಳೂ ಇಂಗ್ಲಿಷ್ ಮಾಧ್ಯಮಕ್ಕೆ ಆಕರ್ಷಿತರಾಗಿರುವುದು ಈ ಅಕ್ಷರ ದೇಗುಲದ ಹಾಜರಾತಿ ಕುಸಿಯಲು ಮುಖ್ಯ ಕಾರಣವಾಗಿದೆ. ವಜ್ರಮಹೋತ್ಸವ ಸಂಭ್ರಮದ ಅಂಚಿನಲ್ಲಿರುವ ಈ ಶಾಲೆ ಈಗ ಮಕ್ಕಳ ಕೊರತೆಯಿಂದ ಸೊರಗುತ್ತಿದೆ. ಪ್ರವೇಶಾತಿ ಹೆಚ್ಚಿಸುವ ಮೂಲಕ ಇಂತಹದ್ದೊಂದು ಅಪರೂಪದ ಶಾಲೆಯನ್ನು ಉಳಿಸಿಕೊಳ್ಳಲು ಶಿಕ್ಷಣ ಇಲಾಖೆ, ಸರ್ಕಾರ ಮತ್ತು ಜನಪ್ರನಿಧಿಗಳು ಶ್ರಮಿಸಬೇಕಿದೆ.
ಎಲ್ಲ ಸ್ಕೂಲ್‌ಗಳಂತಲ್ಲ:
ಸರ್ಕಾರಿ ಶಾಲೆ ಅಂದ ಮಾತ್ರಕ್ಕೆ ಇಲ್ಲಿ ಮೂಗು ಮುರಿಯುವಂತಿಲ್ಲ. ಪಾರಂಪರಿಕ ಕಟ್ಟಡ ಈಗಲೂ ಸುಸ್ಥಿತಿಯಲ್ಲಿದೆ. ಉತ್ತಮವಾಗಿ ನಿರ್ವಹಣೆ ಮಾಡಲಾಗುತ್ತಿದೆ. ಏಳು ಕೊಠಡಿಗಳಿರುವ ಇಲ್ಲಿ ಶೌಚಗೃಹ, ಟಿವಿ, ಕುಡಿಯುವ ನೀರಿನ ಸೌಲಭ್ಯವಿದೆ.
‘ಮಕ್ಕಳು ಸಮವಸ್ತ್ರ ಧರಿಸಿ ಅಚ್ಚುಕಟ್ಟಾಗಿ ಶಿಸ್ತಿನಿಂದ ಶಾಲೆಗೆ ಬರುತ್ತಾರೆ. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ಪ್ರತಿಭಾವಂತರಿದ್ದಾರೆ. ಮೊದಲ ಭಾಷೆ ಹಿಂದಿ, 2 ಮತ್ತು 3ನೇ ಭಾಷೆಯಾಗಿ ಕ್ರಮವಾಗಿ ಇಂಗ್ಲಿಷ್ ಮತ್ತು ಕನ್ನಡ ಬೋಧಿಸಲಾಗುತ್ತಿದೆ. ಗಣಿತ, ವಿಜ್ಞಾನ, ಸಮಾಜವಿಜ್ಞಾನ ವಿಷಯಗಳನ್ನು ಪೂರ್ಣವಾಗಿ ಹಿಂದಿ ಮಾಧ್ಯಮದಲ್ಲಿ ಕಲಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ಹೆಚ್ಚು ಇಂಗ್ಲಿಷ್ ಬಳಸಲಾಗುತ್ತದೆ. ಇದರಿಂದ 7ನೇ ತರಗತಿ ಬಳಿಕ ಇಲ್ಲಿನ ಮಕ್ಕಳು ಇಂಗ್ಲಿಷ್ ಮಾಧ್ಯಮ ಶಿಕ್ಷಣವನ್ನು ಮುಂದುವರಿಸಿಕೊಂಡು ಹೋಗಲು ಅನುಕೂಲವಾಗುತ್ತಿದೆ. ಇಲ್ಲಿ ಕಲಿತವರಲ್ಲಿ ಕೌಶಲಾಧಾರಿತ ವೃತ್ತಿ ಮತ್ತು ಕುಲಕಸುಬಿನ ಜೀವನ ಕಟ್ಟಿಕೊಂಡವರೇ ಹೆಚ್ಚು ಎಂದು ಸಂತಸದಿಂದ ಹೇಳುತ್ತಾರೆ ಈ ಶಾಲೆಯಲ್ಲಿ 20 ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿರುವ ಬುಷಾ ಬಾನು.
ವಲಸೆ ಮಕ್ಕಳು ಅಧಿಕ:
ಇಲ್ಲಿ ವಲಸೆ ಮಕ್ಕಳದ್ದೇ ಪಾರುಪತ್ಯ. ಉದ್ಯೋಗ ಅರಸಿ ಗುಳೆ ಬಂದಿರುವ ರಾಜಸ್ಥಾನ ಮೂಲದ ಕುಟುಂಬಗಳು ನಗರದಲ್ಲಿ ವಿವಿಧ ವ್ಯಾಪಾರ- ವಹಿವಾಟಿನಲ್ಲಿ ಸಕ್ರಿಯವಾಗಿವೆ. ಕೆ.ಟಿ.ರಸ್ತೆ, ದೇವರಾಜ ಅರಸು ರಸ್ತೆ, ಅಶೋಕ ರಸ್ತೆಯಲ್ಲಿ ನೆಲೆ ನಿಂತಿರುವ ಅವರು, ತಮ್ಮ ಮಕ್ಕಳನ್ನು ಈ ಶಾಲೆಗೆ ಕಳುಹಿಸುತ್ತಿದ್ದಾರೆ. ವ್ಯಾಪಾರದಲ್ಲಿ ನಷ್ಟ, ಉದ್ಯೋಗ ಕಳೆದುಕೊಂಡರೆ ಇವರೆಲ್ಲ ಮರಳಿ ತಮ್ಮೂರಿಗೆ ಹೋಗುವುದರಿಂದ ಮಕ್ಕಳ ಕಲಿಕೆಯೂ ಮೊಟಕುಗೊಳ್ಳುತ್ತದೆ. ಇದೇ ಕಾರಣಕ್ಕೆ ಮಕ್ಕಳ ಸಂಖ್ಯೆ ಏಕಾಏಕಿ ಕುಸಿಯುತ್ತದೆ.
ಕನ್ನಡ ಕಲಿತ ಅನ್ಯರು:
ಅನ್ಯಭಾಷೆಯ ಮಕ್ಕಳು ಇಲ್ಲಿ 3ನೇ ಭಾಷೆಯಾಗಿ ಕನ್ನಡವನ್ನು ಬಹಳ ಪ್ರೀತಿಯಿಂದ ಕಲಿಯುತ್ತಾರೆ. ಮನೆ ಭಾಷೆ ಮರಾಠಿ, ಹಿಂದಿ, ಮಾರ್ವಾಡಿಯಾಗಿದ್ದರೂ ಈ ಮಕ್ಕಳು ಸುಲಲಿತವಾಗಿ ಕನ್ನಡ ಮಾತನಾಡುತ್ತಾರೆ. ಜತೆಗೆ, ಈ ಮಕ್ಕಳಿಂದ ಅಂತಾರಾಜ್ಯ ಸಂಸ್ಕೃತಿ ಬಿಂಬಿಸುವ ಶಾಲೆಯಾಗಿದ್ದು, ವಿಭಿನ್ನ ಸಂಸ್ಕೃತಿ ಮತ್ತು ಭಾಷೆ ವಿನಿಮಯಕ್ಕೆ ಇದು ವೇದಿಕೆಯಾಗಿದೆ.
---
ಶಾಲೆಯಲ್ಲಿ ಎಲ್ಲ ಸೌಲಭ್ಯಗಳಿವೆ. ಕಂಪ್ಯೂಟರ್ ಮಾತ್ರ ಇಲ್ಲ. ಇದು ದೊರೆತರೆ ಮಕ್ಕಳ ಕಲಿಕೆಗೆ ನೆರವಾಗಲಿದ್ದು, ದಾನಿಗಳು ಮತ್ತು ಸಂಘ ಸಂಸ್ಥೆಗಳು ಈ ಸೌಲಭ್ಯ ಕಲ್ಪಿಸಿಕೊಟ್ಟರೆ ಮಕ್ಕಳಿಗೆ ಅನುಕೂಲವಾಗಲಿದೆ.
ಎಂ.ಚಂದ್ರಕಲಾ ಮುಖ್ಯಶಿಕ್ಷಕಿ