ಜಿಲ್ಲೆ

ಐಸಿಯುನಲ್ಲಿ ಸರ್ಕಾರಿ ಶಾಲೆ ಕೊಠಡಿಗಳು!

ಬಸವರಾಜ ವೀರಪ್ಪ ಗರಗ

ಕೇಶವಮೂರ್ತಿ ವಿ.ಬಿ. ಹಾವೇರಿ

ಮಕ್ಕಳ ಭವಿಷ್ಯ ರೂಪಿಸಬೇಕಿರುವ ಜಿಲ್ಲೆಯ ಸರ್ಕಾರಿ ಶಾಲೆಗಳ ನೂರಾರು ಕೊಠಡಿಗಳು ಶಿಥಿಲಾವಸ್ಥೆಗೆ ತಲುಪಿವೆ. ಜುಲೈ ಆರಂಭದಿಂದ ಈವರೆಗೆ ಸುರಿದ ಮಳೆಗೆ ಜಿಲ್ಲೆಯ 627 ಸರ್ಕಾರಿ ಶಾಲೆಗಳ 1,273 ಕೊಠಡಿಗಳು ಹಾನಿಗೀಡಾಗಿದ್ದು, ಇದರಲ್ಲಿ 254 ಕ್ಲಾಸ್​ರೂಮ್ಳು ಸಂಪೂರ್ಣ ಹಾಳಾಗಿದೆ.

ಹಾವೇರಿ ತಾಲೂಕಿನ 100 ಶಾಲೆಗಳ 217 ಕೊಠಡಿಗಳಿಗೆ ಧಕ್ಕೆಯಾಗಿದೆ. ರಾಣೆಬೆನ್ನೂರ ತಾಲೂಕಿನ 100 ಶಾಲೆಗಳ 229 ಕೊಠಡಿಗಳು, ಬ್ಯಾಡಗಿಯ 90 ಶಾಲೆಗಳ 170 ಕೊಠಡಿಗಳು, ಹಿರೇಕೆರೂರಿನ 71 ಶಾಲೆಗಳ 117 ಕೊಠಡಿಗಳು, ಸವಣೂರಿನ 82 ಶಾಲೆಗಳ 166 ಕೊಠಡಿಗಳು, ಶಿಗ್ಗಾಂವಿಯ 54 ಶಾಲೆಗಳ 90 ಕೊಠಡಿಗಳು, ಹಾನಗಲ್ಲನ 130 ಶಾಲೆಗಳ 284 ಕೊಠಡಿಗಳು ಹಾನಿಗೀಡಾಗಿವೆ.

ಜಿಲ್ಲೆಯಲ್ಲಿ ಜು. 1ರಿಂದ ಜು. 24ರವರೆಗೆ ಸುರಿದ ಮಳೆಗೆ ಹಾನಿಗೀಡಾದ ಕೊಠಡಿಗಳನ್ನು ಶಿಕ್ಷಣ ಇಲಾಖೆ ಮುಖ್ಯೋಪಾಧ್ಯಾಯರಿಂದ ಸಮೀಕ್ಷೆ ಮಾಡಿಸಿ ವರದಿ ಸಿದ್ಧಪಡಿಸಿದೆ. ಒಟ್ಟಾರೆ 1,273 ಕೊಠಡಿಗಳು ಹಾನಿಗೀಡಾಗಿದ್ದು, ಇದರಲ್ಲಿ 254 ಕೊಠಡಿ ಶಿಥಿಲಾವಸ್ಥೆಗೆ ತಲುಪಿರುವ ಕುರಿತು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾಗಿದೆ. ಶಿಥಿಲಾವಸ್ಥೆಗೆ ತಲುಪಿದ ಕೊಠಡಿಗಳು ತರಗತಿ ನಡೆಸಲೂ ಯೋಗ್ಯವಾಗಿಲ್ಲ. ಯಾವಾಗ ಕುಸಿದು ಬೀಳುತ್ತವೋ ಎಂಬ ಭಯ ಆವರಿಸಿದೆ. ಹೀಗೆ ದಯನೀಯ ಸ್ಥಿತಿಗೆ ಅನೇಕ ಸರ್ಕಾರಿ ಶಾಲೆಗಳು ತಲುಪಿದ್ದು, ಮಕ್ಕಳನ್ನು ಹೇಗೆ ಶಾಲೆಗೆ ಕಳುಹಿಸುವುದು ಎಂಬ ಚಿಂತೆ ಪಾಲಕರದ್ದಾಗಿದೆ.

ಸರ್ಕಾರಿ ಶಾಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ದಾಖಲಾತಿ ಕಡಿಮೆಯಾಗುತ್ತಲೇ ಇದೆ. ಇದಕ್ಕೆ ಕೊಠಡಿಗಳ ದುಸ್ಥಿತಿಯೂ ಕಾರಣ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಸೇರಿದಂತೆ ಸರ್ಕಾರ ಮುತುವರ್ಜಿ ವಹಿಸಬೇಕು. ಕೂಡಲೇ ಹಾನಿಗೀಡಾದ ಕೊಠಡಿಗಳನ್ನು ದುರಸ್ತಿಪಡಿಸಲು ಕ್ರಮ ಕೈಗೊಳ್ಳಬೇಕು. ಗುಣಮಟ್ಟದ ಕಾಮಗಾರಿ ಆಗುವಂತೆ ನೋಡಿಕೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

25 ಕೋಟಿ ರೂ. ಅಂದಾಜು ವೆಚ್ಚ

ದುರಸ್ತಿಗೀಡಾದ 1,273 ಕೊಠಡಿಗಳ ದುರಸ್ತಿಗೆ ಶಿಕ್ಷಣ ಇಲಾಖೆ 25 ಕೋಟಿ ರೂ. ಅಂದಾಜು ವೆಚ್ಚ ಸಿದ್ಧಪಡಿಸಿದೆ. ಎಸ್​ಡಿಆರ್​ಎಫ್ ಅನುದಾನದಡಿ ಒಂದು ಕೊಠಡಿಗೆ 2 ಲಕ್ಷ ರೂ. ನೀಡಲಾಗುತ್ತದೆ. ಇದರ ಆಧಾರದ ಮೇಲೆ ಅಂದಾಜು ವೆಚ್ಚ ಸಿದ್ಧಪಡಿಸಿ, ಜಿಲ್ಲಾಧಿಕಾರಿಗೆ ಸಲ್ಲಿಸಿದೆ. ಡಿಸಿ ಅವರು ಇಂಜಿನಿಯರ್​ಗಳ ಮೂಲಕ ಮತ್ತೊಮ್ಮೆ ಸಮೀಕ್ಷೆ ಮಾಡಿಸಿ, ಅಂತಿಮವಾಗಿ ಅಂದಾಜು ವೆಚ್ಚ, ಕ್ರಿಯಾ ಯೋಜನೆಯೊಂದಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜಿಲ್ಲೆಯಲ್ಲಿ ಜುಲೈನಲ್ಲಿ ಸುರಿದ ಮಳೆಗೆ 627 ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ 1,273 ಕೊಠಡಿಗಳಿಗೆ ಧಕ್ಕೆಯಾಗಿರುವ ಕುರಿತು ಮುಖ್ಯಾಧ್ಯಾಪಕರಿಂದ ಪಡೆದ ವರದಿಯನ್ನು ಜಿಲ್ಲಾಧಿಕಾರಿಯವರಿಗೆ ಸಲ್ಲಿಸಲಾಗಿದ್ದು, ಶೀಘ್ರದಲ್ಲೇ ದುರಸ್ತಿ ಮಾಡಿಸಲಾಗುವುದು. | ಎಸ್.ಎಸ್.ಅಡಿಗ, ಜಿಲ್ಲಾ ಯೋಜನಾ ಉಪ ಸಮನ್ವಯಾಧಿಕಾರಿ, ಶಿಕ್ಷಣ ಇಲಾಖೆ