ಜಿಲ್ಲೆ

ಸರ್ಕಾರಿ ಶಾಲೆ ದುರಸ್ತಿಗೊಳಿಸಿ ಮಾದರಿಯಾದ ಪೊಲೀಸರು

Mysuru - Desk - Naveen Kumar H P

ಕೆ.ಎಂ.ದೊಡ್ಡಿ : ಸಮೀಪದ ಕಪ್ಪರೆಕೊಪ್ಪಲು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಕಟ್ಟಡದ ಕೊಠಡಿ ಕಿತ್ತು ಹೋಗಿ ಧೂಳಿನಲ್ಲಿ ಪಾಠ ಕೇಳುತಿದ್ದ ಮಕ್ಕಳಿಗೆ ಬೀಟ್ ಪೊಲೀಸರು ನೆರವಾಗಿದ್ದಾರೆ. ನೆಲಕ್ಕೆ ಗಾರೆ ಹಾಕಿಸುವ ಮೂಲಕ ಜನಸ್ನೇಹಿ ಪೊಲೀಸರಾಗಿದ್ದಾರೆ.

ಶಾಲೆಯ ಎರಡು ಕೊಠಡಿಗಳು ನೆಲ ಗಾರೆ ಸಂಪೂರ್ಣ ಕಿತ್ತುಹೋಗಿತ್ತು. ಮಕ್ಕಳು ಧೂಳಿನಲ್ಲಿ ಪಾಠ ಕೇಳುತ್ತಿದ್ದರು. ಇದನ್ನು ಗಮನಿಸಿದ ಭಾರತೀನಗರದ ಹೆಡ್ ಕಾನ್‌ಸ್ಟೆಬಲ್ ಪ್ರಭುಸ್ವಾಮಿ, ಕಾನ್‌ಸ್ಟೆಬಲ್ ಸುಬ್ರಮಣ್ಯ ಅವರು ವೈಯಕ್ತಿಕವಾಗಿ ಹಾಗೂ ಗ್ರಾಮಸ್ಥರ ಜತೆಗೂಡಿ ಸುಮಾರು 40 ಸಾವಿರ ರೂ. ಸಂಗ್ರಹಿಸಿ ನೆಲ ಗಾರೆ ಹಾಕಿಸಿದ್ದಾರೆ.

ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಚ್.ಕಾಳಿರಯ್ಯ ಮಾತನಾಡಿ, ಪೊಲೀಸರು ಎಂದರೆ ಭಯಬೀಳುವ ಕಾಲಘಟ್ಟದಲ್ಲಿ ಎಲ್ಲ ಪೊಲೀಸರು ಒಂದೇ ರೀತಿ ಇರುವುದಿಲ್ಲ ಎನ್ನುವುದಕ್ಕೆ ಸಾಕಷ್ಟು ಪೊಲೀಸರು ನಮ್ಮ ಕಣ್ಣೇದುರು ಇದ್ದಾರೆ. ಪ್ರಭುಸ್ವಾಮಿ ಮತ್ತು ಸುಬ್ರಮಣ್ಯ ಅವರು ಸಾಮಾಜಿಕ ಚಿಂತನೆಗಳನ್ನು ಇಟ್ಟುಕೊಂಡು ಸೇವೆ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಹಾಯಕ ಸಬ್‌ಇನ್ಸ್‌ಪೆಕ್ಟರ್ ವೆಂಕಟೇಶ್, ಕೆ.ಕೆ.ಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನವೀನ್, ಮಾಜಿ ಅಧ್ಯಕ್ಷ ಸುರೇಶ್, ಶಾಲಾ ಶಿಕ್ಷಕ ರಾಜೇಶ್, ಮುಖಂಡರಾದ ವೀರಭದ್ರಯ್ಯ, ರಾಜು, ಚಿಕ್ಕಸಿದ್ದಯ್ಯ, ಭೂಮಿಸಿದಯ್ಯ, ಮಧು, ಚೇತನ್ ಸೇರಿದಂತೆ ಮತ್ತಿತರರು ಇದ್ದರು.

ಪೊಲೀಸರು ತಮ್ಮ ಕರ್ತವ್ಯದ ಜತೆಗೆ ಸಾಮಾಜಿಕ ಚಿಂತನೆ ಇಟ್ಟು ಕೊಂಡು ತಮ್ಮ ವ್ಯಾಪ್ತಿ ಮೀರಿ ಸಮಾಜ ಸೇವೆ ಮಾಡುತ್ತಿರುವುದು ಉತ್ತಮ ಬೆಳವಣಿಗೆ. ಸರ್ಕಾರಿ ಶಾಲಾ ಕೊಠಡಿಯನ್ನು ಗ್ರಾಮಸ್ಥರ ನೆರವಿನೊಂದಿಗೆ ದುರಸ್ತಿ ಕಾರ್ಯಮಾಡಿದ್ದು ಶ್ಲಾಘನೀಯ.

ಮಲ್ಲಿಕಾರ್ಜನ ಬಾಲದಂಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮಂಡ್ಯ