ಜಿಲ್ಲೆ

ಗ್ರಾಮೀಣ ಮಕ್ಕಳು ಕಲಿಕೆಯಲ್ಲಿ ಮುಂದು: ವಿಯಾವಿ ಸಲ್ಯೂಷನ್ಸ್‌ನ ಮುಖ್ಯ ಆಡಳಿತಾಧಿಕಾರಿ ಸ್ವರ್ಣ ಅನೂಪ್ ಹೇಳಿಕೆ

ಮಂಡ್ಯ: ಗ್ರಾಮೀಣ ಪ್ರದೇಶದ ಮಕ್ಕಳು ಕಲಿಕೆಯಲ್ಲಿ ಮುಂದಿರುತ್ತಾರೆ. ಅವರಿಗೆ ಇನ್ನಷ್ಟು ಅವಕಾಶದ ಜತೆಗೆ ಸೌಲಭ್ಯ ಒದಗಿಸಿಕೊಡಬೇಕು ಎಂದು ಬೆಂಗಳೂರಿನ ವಿಯಾವಿ ಸಲ್ಯೂಷನ್ಸ್ ಕಂಪನಿಯ ಮುಖ್ಯ ಆಡಳಿತಾಧಿಕಾರಿ ಸ್ವರ್ಣ ಅನೂಪ್ ತಿಳಿಸಿದರು.

ತಾಲೂಕಿನ ಮರಡೀಪುರ ಗ್ರಾಮದಲ್ಲಿ ವಿಯಾವಿ ಸಲ್ಯೂಷನ್ಸ್ ಕಂಪನಿ ಹಾಗೂ ಮಂಗಲ ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ಬ್ಯಾಂಡ್‌ಸೆಟ್ ವಿತರಿಸಿ ಮಾತನಾಡಿದ ಅವರು, ಸೃಜನಶೀಲ ಚಟುವಟಿಕೆಗಳನ್ನು ಬಾಲ್ಯಾವಸ್ಥೆಯಲ್ಲೇ ಮಕ್ಕಳಿಗೆ ಕಲ್ಪಿಸುವ ವಾತಾವರಣವನ್ನು ಪಾಲಕರು ಮತ್ತು ಶಿಕ್ಷಕರು ಮಾಡಬೇಕಿದೆ ಎಂದರು.

ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಅಧ್ಯಕ್ಷ ಮಂಗಲ ಎಂ.ಯೋಗೀಶ್ ಮಾತನಾಡಿ, ಶಾಲೆಗೆ ಬರುವಂತೆ ಪ್ರೇರೇಪಿಸಲು ಮಕ್ಕಳಿಗೆ ಅಗತ್ಯವಿರುವ ಪರಿಕರಗಳನ್ನು ನಮ್ಮ ಸಂಸ್ಥೆಯು ಸಿಎಸ್‌ಆರ್ ನಿಧಿಯಡಿ ಶಾಲೆಗಳಿಗೆ ನೀಡಲು ಸಂಬಂಧಿಸಿದ ಕಾರ್ಪೋರೇಟ್‌ಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.

ಪರಿಸರ ಸಂಸ್ಥೆ ಕಾರ್ಯದರ್ಶಿ ಕೆ.ಪಿ.ಅರುಣಕುಮಾರಿ, ವಿ.ಸಿ ಫಾರ್ಮ್ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಪ್ರಸನ್ನ, ಮುಖ್ಯಶಿಕ್ಷಕ ರಾಘವೇಂದ್ರ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ರಾಜೇಗೌಡ ಇತರರಿದ್ದರು.