ಜಿಲ್ಲೆ

ಸದ್ಬಳಕೆಯಾಗಲಿ ಸರ್ಕಾರದ ಯೋಜನೆ

ಸೋಮನಾಥ ರೆಡ್ಡಿ

ಮುಂಡರಗಿ: ಶುಚಿ ಹಾಗೂ ರುಚಿಯಾದ ಮಧ್ಯಾಹ್ನದ ಬಿಸಿಯೂಟ ತಯಾರಿಸಿ ಮಕ್ಕಳಿಗೆ ಉಣಬಡಿಸುವುದು ಪುಣ್ಯದ ಕೆಲಸ. ಗ್ರಾಮೀಣ ಪ್ರದೇಶ ಹಾಗೂ ನಗರ ಪ್ರದೇಶಗಳಲ್ಲಿ ಬಡವರ ಮಕ್ಕಳು ಸರ್ಕಾರಿ ಶಾಲೆಗಳಿಗೆ ಹೆಚ್ಚಾಗಿ ಬರುತ್ತಾರೆ. ಅಂತಹ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರ ನೀಡಲು ಸರ್ಕಾರ ಮುಂದಾಗಿದೆ. ಅದನ್ನು ನಾವು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ತಾ.ಪಂ ಇಒ ವಿಶ್ವನಾಥ ಹೊಸಮನಿ ಹೇಳಿದರು.

ತಾಲೂಕಿನ ಕೊರ್ಲಹಳ್ಳಿ ಗ್ರಾಮದ ಆದರ್ಶ ವಿದ್ಯಾಲಯದಲ್ಲಿ ಪ್ರಧಾನಮಂತ್ರಿ ಪೋಷಣ ಶಕ್ತಿ ನಿರ್ಮಾಣ ಯೋಜನೆಯಡಿ (ಅಕ್ಷರ ದಾಸೋಹ) ಮುಂಡರಗಿ ಹೋಬಳಿಯ ಬಿಸಿಯೂಟದ ಅಡುಗೆ ಸಿಬ್ಬಂದಿಗೆ ಮಂಗಳವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ರಂಜನಾ ತಳಗೇರಿ ಮಾತನಾಡಿದರು. ಸಿಪಿಆರ್ ಡಿ.ವೈ. ನಂದೀಶಕುಮಾರ ಮುಂಡರಗಿ ಹೋಬಳಿ ಅಕ್ಷರ ದಾಸೋಹ ಬಿಸಿಯೂಟ ಅಡುಗೆ ಸಿಬ್ಬಂದಿಗೆ ತರಬೇತಿ ನೀಡಿದರು. ಆದರ್ಶ ವಿದ್ಯಾಲಯದ ಮುಖ್ಯಶಿಕ್ಷಕಿ ಹಂಸವೇಣಿ ಕೆ.ಆರ್, ಶಿಕ್ಷಕರಾದ ಕೊಟ್ರಯ್ಯ ಹಿರೇಮಠ, ಎನ್.ಆರ್.ಎಲ್.ಎಂ ಸಂಯೋಜಕ ಸಿದ್ದರಾಮಪ್ಪ ಇತರರು ಇದ್ದರು. ಸಿ.ಪಿ.ಆರ್. ಕೆ.ಬಿ.ತಂಬ್ರಳ್ಳಿ ಕಾರ್ಯಕ್ರಮ ನಿರೂಪಿಸಿದರು.