ಮೈಸೂರು: ಕಾಂಗ್ರೆಸ್ ಎಂದಿಗೂ ಧ್ವೇಷದ ರಾಜಕಾರಣ ಮಾಡುವುದಿಲ್ಲ, ನಾವು ಈ ನೆಲದ ಕಾನೂನು ಪ್ರಕಾರ ನಡೆದುಕೊಳ್ಳುತ್ತೇವೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಸಂಸದ ಪ್ರಜ್ವಲ್ ರೇವಣ್ಣ, ನಟ ದರ್ಶನ್ ಪ್ರಕರಣಗಳಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿ.ಎಸ್. ಯಡಿಯೂರಪ್ಪ ಅವರ ಪ್ರಕರಣ ನ್ಯಾಯಾಲಯದಲ್ಲಿ ಇದೆ. ನ್ಯಾಯಾಲಯದ ಆದೇಶದ ವಿಚಾರವಾಗಿ ನಾನು ಯಾವುದೇ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ನಾವೇನಾದರು ಯಡಿಯೂರಪ್ಪ ವಿರುದ್ಧ ದೂರು ನೀಡಿದ್ದೇವಾ? ದೂರು ನೀಡಿದ್ದು ಸಂತ್ರಸ್ತೆಯ ತಾಯಿ. ಇದರಲ್ಲಿ ನಮ್ಮ ಹಸ್ತಕ್ಷೇಪ ಹೇಗೆ ಸಾಧ್ಯ? ನ್ಯಾಯಾಲಯ ನೀಡುವ ಆದೇಶವನ್ನು ಪ್ರತಿಯೊಬ್ಬರು ಪಾಲಿಸಬೇಕಾಗುತ್ತದೆ. ವಿರೋಧ ಪಕ್ಷದ ಎಲ್ಲ ಆರೋಪಗಳಿಗೆ ಉತ್ತರ ನೀಡುವ ಅವಶ್ಯಕತೆ ಇಲ್ಲ ಎಂದು ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಟೀಕೆಗೆ ತಿರುಗೇಟು ನೀಡಿದರು.
ಮುಂಗಾರು ದುರ್ಬಲಗೊಂಡಿದ್ದು, ಈ ಕುರಿತು ತಜ್ಞರೊಂದಿಗೆ ಚರ್ಚಿಸಿ ಮುಂದೆ ಏನು ಮಾಡಬೇಕು ಎಂಬ ಕುರಿತು ನಿರ್ಧಾರ ಕೈಗೊಳ್ಳಲಾಗುವುದು. ಮೋಡ ಬಿತ್ತನೆ ವಿಚಾರವಾಗಿ ಹೇಳಿಕೆ ನೀಡಲು ನಾನು ತಜ್ಞನಲ್ಲ. ಹಾಗಾಗಿ ತಜ್ಞರೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.