ಬನ್ನೂರಿನ ಮಾರ್ಗವಾಗಿ ಮೇಕೆದಾಟು ವೀಕ್ಷಣೆಗೆ ಬುಧವಾರ ಹೊರಟ ರೈತ ಮುಖಂಡರು ಪಟ್ಟಣದ ಅತಿಥಿ ಗೃಹದಲ್ಲಿ ಸಮಾಲೋಚನೆ ಸಭೆ ನಡೆಸಿದರು. ಕುರುಬೂರು ಶಾಂತಕುಮಾರ್, ಪಿ.ಆರ್.ಪಾಂಡ್ಯನ್, ಸುಧಾ ಧರ್ಮಲಿಂಗಂ, ಪಾಂಡಿಚೇರಿ ಸೋಮುಪಿಳ್ಳೆ, ಮಂಜೇಶ್‌ಗೌಡ, ಅತ್ತಳ್ಳಿದೇವರಾಜು, ಕಿರಗಸೂರು ಶಂಕರ್, ಗೌರಿಶಂಕರ್, ಬಡಗಲಪುರ ನಾಗರಾಜ್, ಬಿ.ಪಿ.ಪರಶಿವಮೂರ್ತಿ, ವೆಂಕಟೇಗೌಡ, ಸತೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.  
ಜಿಲ್ಲೆ

ಮೇಕೆದಾಟು ವಿಚಾರದಲ್ಲಿ ಸರ್ಕಾರದ ನಿರ್ಲಕ್ಷ್ಯ

ಶಿವಶಂಕರ್ ಎಂ. ಹೆಬ್ಬಳ್ಳ

ಕುರುಬೂರು ಶಾಂತಕುಮಾರ್ ಆರೋಪ

ಬನ್ನೂರು: ರೈತ ದೇಶದ ಬೆನ್ನೆಲುಬು. ರೈತನ ಕಷ್ಟವನ್ನು ಸರ್ಕಾರಗಳು ಅರ್ಥ ಮಾಡಿಕೊಂಡು ಅದನ್ನು ಪರಿಹರಿಸುವತ್ತಾ ಗಮನ ಹರಿಸಬೇಕು ಎಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.

ಪಟ್ಟಣದ ಮಾರ್ಗವಾಗಿ ಮೇಕೆದಾಟು ವೀಕ್ಷಣೆಗೆ ಬುಧವಾರ ಕರ್ನಾಟಕ ಮತ್ತು ತಮಿಳುನಾಡು ರೈತ ಮುಖಂಡರ ಜತೆ ಹೊರಟು ಪಟ್ಟಣದ ಅತಿಥಿಗೃಹದಲ್ಲಿ ಸಮಾಲೋಚನೆ ನಡೆಸಿ ಮಾತನಾಡಿದರು.

ಈಗಾಗಲೇ ಮೈಸೂರಿನಲ್ಲಿ ಇದೇ ವಿಚಾರವಾಗಿ ಕಾವೇರಿ ಕುಟುಂಬಂ ಎನ್ನುವ ಕಾರ್ಯಕ್ರಮದ ಮೂಲಕ ಎರಡು ರಾಜ್ಯಗಳ ರೈತರನ್ನು ಒಗ್ಗೂಡಿಸಿ ಮೇಕೆದಾಟು ಯೋಜನೆಯ ಬಗ್ಗೆ ಸಾಧಕ ಬಾಧಕವನ್ನು ತಿಳಿಸಲಾಗಿದೆ. ಅದರ ವೀಕ್ಷಣೆಗೆ ತಂಡವನ್ನು ರಚಿಸಿ ಅಲ್ಲಿಗೆ ತೆರಳುತ್ತಿದ್ದೇವೆ ಎಂದು ತಿಳಿಸಿದರು.

ಮೇಕೆದಾಟು ಯೋಜನೆ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರುತ್ತಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರದ ಗಮನ ಸೆಳೆದು ಯೋಜನೆ ರೂಪಿಸಲು ರೈತರೊಂದಿಗೆ ಶ್ರಮಿಸಲಾಗುತ್ತಿದೆ. ಮೇಕೆದಾಟು ಯೋಜನೆಯಿಂದ ಪೋಲಾಗುತ್ತಿರುವಂತ ನೀರು ರೈತರಿಗೆ ಉಪಯೋಗವಾಗುವುದಲ್ಲದೆ, ಬೆಂಗಳೂರಿನ ಜನರಿಗೆ ನೀರು ನೀಡಿದಂತೆ ಆಗುತ್ತದೆ ಎಂದು ತಿಳಿಸಿದರು.

ಸುಪ್ರೀಂ ಕೋರ್ಟ್ ನಿಯಮದಂತೆ ತಮಿಳುನಾಡಿಗೆ ತಿಳಿಸಲಾಗಿರುವಷ್ಟು ನೀರನ್ನು ನೀಡಿ, ಉಳಿದ ನೀರನ್ನು ಬಳಸಿಕೊಳ್ಳಲು ಅನುಕೂಲವಾಗುತ್ತದೆ. ಇದರಿಂದ ಅರಣ್ಯ ಸಂಪತ್ತಿಗೆ ಯಾವುದೇ ತೊಂದರೆ ಬರುವುದಿಲ್ಲ ಎಂದರು.

ಪ್ರಧಾನ ಕಾರ್ಯದರ್ಶಿ ಅತ್ತಳ್ಳಿ ದೇವರಾಜು ಮಾತನಾಡಿ, ಕಾವೇರಿ ಮತ್ತು ಕಬಿನಿ ನದಿಗಳು ಕರ್ನಾಟಕದಲ್ಲಿ ಹುಟ್ಟಿ ಹರಿದರೂ, ರೈತರ ಕೃಷಿಗೆ ಹಾಗೂ ಬೆಂಗಳೂರು ಮತ್ತು ರಾಮನಗರ ನಗರಗಳಿಗೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಸರ್ಕಾರ ಕೂಡಲೇ ಮೇಕೆದಾಟು ಅಣೆಕಟ್ಟು ಕಟ್ಟಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ತಮಿಳುನಾಡಿದ ಪಿ.ಆರ್.ಪಾಂಡ್ಯನ್, ಸುಧಾ ಧರ್ಮಲಿಂಗಂ, ಪಾಂಡಿಚೇರಿ ಸೋಮುಪಿಳ್ಳೆ, ಮಂಜೇಶ್‌ಗೌಡ, ಕಿರಗಸೂರು ಶಂಕರ್, ಗೌರಿಶಂಕರ್, ಬಡಗಲಪುರ ನಾಗರಾಜ್, ಬಿ.ಪಿ.ಪರಶಿವಮೂರ್ತಿ, ವೆಂಕಟೇಗೌಡ, ಸತೀಶ್, ಮಹೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.