ಬೆಂಗಳೂರು: ರಾಜ್ಯದ ಎಲ್ಲ ಸರ್ಕಾರಿ ವೈದ್ಯಕೀಯ ಕಾಲೇಜುಗಳ ನಿವಾಸಿ ವೈದ್ಯರಿಗೆ (ಪಿ.ಜಿ. ವಿದ್ಯಾರ್ಥಿಗಳು) ನೀಡುತ್ತಿರುವ ಸ್ಟೈಂಡ್ ಮೊತ್ತವನ್ನು ಹೆಚ್ಚಿಸುವಂತೆ ಆಗ್ರಹಿಸಿ ಈಗಾಗಲೇ ಕಪ್ಪುಪಟ್ಟಿ ಧರಿಸಿ ಕಾರ್ಯನಿರ್ವಹಿಸುತ್ತಿರುವ ಪಿಜಿ ವಿದ್ಯಾರ್ಥಿಗಳು, ಆ. 12ರಿಂದ ಪ್ರತಿಭಟನೆ ತೀವ್ರಗೊಳಿಸಲು ನಿರ್ಧರಿಸಿದ್ದಾರೆ.
ವಿದ್ಯಾರ್ಥಿವೇತನ ಹೆಚ್ಚಳ ಕುರಿತು ಕಳೆದ ಒಂದು ವರ್ಷದಿಂದ ಮುಖ್ಯಮಂತ್ರಿಗಳು, ವೈದ್ಯಕೀಯ ಶಿಕ್ಷಣ ಸಚಿವರು ಸೇರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಲಾಗಿದೆ. ಆದರೂ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ. ಹೀಗಾಗಿ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಇಂಟರ್ನ್‌ಗಳು, ಸ್ನಾತಕೋತ್ತರ ಪದವೀಧರರು, ಸೂಪರ್ ಸ್ಪೆಷಾಲಿಟಿ ನಿವಾಸಿ ವೈದ್ಯರು ಹಾಗೂ ಹಿರಿಯ ನಿವಾಸಿ ವೈದ್ಯರು ಸ್ವಾತಂತ್ರ್ಯ ಉದ್ಯಾನದಲ್ಲಿ ಅನಿರ್ದಿಷ್ಟ ಕಾಲ ಪ್ರತಿಭಟನೆ ನಡೆಸಲಿದ್ದಾರೆ ಎಂದು ಕರ್ನಾಟಕ ನಿವಾಸಿ ವೈದ್ಯರ ಸಂಘದ ಅಧ್ಯಕ್ಷ ಡಾ. ಸಿರೀಶ್ ಶಿವರಾಮಯ್ಯ ತಿಳಿಸಿದ್ದಾರೆ.
ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ವೈದ್ಯಕೀಯ ಕೋರ್ಸ್ ಶುಲ್ಕ ವರ್ಷಕ್ಕೆ 1.25 ಲಕ್ಷ ರೂ. ಇದೆ. ಇದು ದೇಶದಲ್ಲೇ ಅತಿಹೆಚ್ಚಿನ ಶುಲ್ಕ. ಅದೇ ರೀತಿ ಪಿ.ಜಿ. ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ಪ್ರಥಮ ವರ್ಷದಲ್ಲಿ 45 ಸಾವಿರ ರೂ., ದ್ವಿತೀಯ ವರ್ಷದಲ್ಲಿ 50 ಸಾವಿರ ರೂ. ಹಾಗೂ ಅಂತಿಮ ವರ್ಷ 55 ಸಾವಿರ ರೂ. ಇದೆ. ಇದು ದೇಶದಲ್ಲೇ ಅತಿಕಡಿಮೆ ವಿದ್ಯಾರ್ಥಿವೇತನವಾಗಿದೆ. ಆದರೆ ಕೆಲಸದೊತ್ತಡ ಮಾತ್ರ ಹೇಳತೀರದಷ್ಟಿದೆ. ಕೆಲವೊಮ್ಮೆ 48 ಗಂಟೆಗಳ ಕಾಲ ಕೆಲಸ ಮಾಡಿಸಿಕೊಳ್ಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ವೇಳೆ ತುರ್ತು ಚಿಕಿತ್ಸೆ ಹೊರತುಪಡಿಸಿ ಪಿ.ಜಿ. ವಿದ್ಯಾರ್ಥಿಗಳು ಹೊರ ರೋಗಿಗಳ ವಿಭಾಗ ಹಾಗೂ ತುರ್ತು ಅಲ್ಲದ ಸೇವೆಗಳನ್ನು ನೀಡುವುದಿಲ್ಲ. ಇದರಿಂದ ರೋಗಿಗಳಿಗೆ ತೊಂದರೆಯಾದರೆ ವಿಷಾದಿಸುತ್ತೇವೆ. ಆದರೆ ಸರ್ಕಾರ ನಮ್ಮ ಬೇಡಿಕೆಗಳನ್ನು ಪರಿಗಣಿಸಿ ಈಡೇರಿಸುವವರೆಗೂ ನಮ್ಮ ಹೋರಾಟ ನಿಲ್ಲದು ಎಂದು ಹೇಳಿದರು.
ಅತಿಹೆಚ್ಚು ಶುಲ್ಕ, ಅತಿಕಡಿಮೆ ವೇತನ: ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಕೋರ್ಸ್ ಶುಲ್ಕ ತಲಾ 40 ಸಾವಿರ ರೂ. ಇದ್ದು, ವಿದ್ಯಾರ್ಥಿವೇತನ ಕ್ರಮವಾಗಿ 1.20 ಲಕ್ಷ ರೂ. ಹಾಗೂ 1.10 ಲಕ್ಷ ರೂ. ಇದೆ. ಒಡಿಶಾದಲ್ಲಿ ಶುಲ್ಕ 35 ಸಾವಿರ ರೂ. ಹಾಗೂ ವಿದ್ಯಾರ್ಥಿವೇತನ 65 ಸಾವಿರ ರೂ. ಇದೆ. 8 ಸಾವಿರ ರೂ. ಶುಲ್ಕ ಪಡೆಯುವ ಮಣಿಪುರದಲ್ಲೂ 90 ಸಾವಿರ ರೂ. ವಿದ್ಯಾರ್ಥಿವೇತನ ಹಾಗೂ ಅತಿಕಡಿಮೆ ವಾರ್ಷಿಕ ಸಾವಿರ ರೂ. ಶುಲ್ಕ ಪಡೆಯುವ ಜಾರ್ಖಂಡ್‌ನಲ್ಲಿಯೂ 87 ಸಾವಿರ ರೂ. ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಯಾವುದೇ ಶುಲ್ಕವನ್ನು ಪಡೆಯದ ಬಿಹಾರದಲ್ಲಿ 80 ಸಾವಿರ ರೂ. ನೀಡಲಾಗುತ್ತಿದೆ. ಆದರೆ ರಾಜ್ಯದಲ್ಲಿ ಹೆಚ್ಚು ಶುಲ್ಕ ಪಡೆದು, ಕಡಿಮೆ ವೇತನ ನೀಡುವ ಮೂಲಕ ವಂಚಿಸಲಾಗುತ್ತಿದೆ ಎಂದು ಡಾ. ಸಿರೀಶ್ ಶಿವರಾಮಯ್ಯ ದೂರಿದರು.