ಜಿಲ್ಲೆ

ಸರ್ಕಾರಿ ಕೆಲಸ ಕೊಡಿಸುವುದಾಗಿ ವಂಚನೆ: ಮೂವರ ವಿರುದ್ಧ ದೂರು

ಮೈಸೂರು: ವಂಚನೆ ದೂರು ದಾಖಲು ಸರ್ಕಾರಿ ಕೆಲಸ ಕೊಡಿಸುವುದಾಗಿ ವಂಚಿಸಿದ ಮೂವರ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳವಾಡಿಯ ಸುಪ್ರಿಯಾ ಎಂಬುವವರು ಸಂದೀಪ್ ಕುಮಾರ್, ಆತನ ಸ್ನೇಹಿತರಾದ ಮನೋಜ್ ಕುಮಾರ್, ಪುನೀತ್ ವಿರುದ್ಧ ದೂರು ನೀಡಿದ್ದಾರೆ.ಸಂದೀಪ್‌ಕುಮಾರ್ ನನ್ನ ಬಳಿ ಹಂತ ಹಂತವಾಗಿ 21 ಲಕ್ಷ ರೂ. ನಗದು ಮತ್ತು ಕಾರ್ ಪಡೆದು ವಾಪಸ್ ನೀಡಿಲ್ಲ.

ಜತೆಗೆ ಆತನ ಸ್ನೇಹಿತ ಮನೋಜ್‌ಕುಮಾರ್ ಹಣ ಪಡೆದು ವಂಚಿಸಿದ್ದಾರೆ. ಇದರೊಂದಿಗೆ ನನ್ನ ಕುಟುಂಬದವರಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ 2.5 ಲಕ್ಷ ರೂ. ಹಣ ಪಡೆದು ಮೋಸ ಮಾಡಿದ್ದಾರೆ. ಹಣ ವಾಪಸ್ ಕೇಳಿದ್ದಕ್ಕೆ ಬೆದರಿಕೆ ಹಾಕಿದ್ದಾರೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.