ಜಿಲ್ಲೆ

ಸರ್ಕಾರಿ ಸೌಲಭ್ಯ ಮನೆ ಬಾಗಿಲಿಗೆ ತಲುಪಿಸಿ

ನಾಯಕನಹಟ್ಟಿ: ರೈತರನ್ನು ಕಚೇರಿಗೆ ಅಲೆದಾಡಿಸದೆ ಎಲ್ಲ ಸೌಲಭ್ಯಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸುವಂತಹ ಕೆಲಸಗಳನ್ನು ಅಧಿಕಾರಿಗಳು ಮಾಡಬೇಕಿದೆ ಎಂದು ಶಾಸಕ ಟಿ.ರಘುಮೂರ್ತಿ ಸೂಚಿಸಿದರು.

ತುರುವನೂರು ಹೋಬಳಿಯ ಬೆಳಘಟ್ಟ ಮತ್ತು ಕೂನಬೇವು ಗ್ರಾಪಂ ವ್ಯಾಪ್ತಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜನಸ್ಪಂದನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ರಾಜ್ಯ ಸರ್ಕಾರ ರೈತರಿಗೆ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಎಲ್ಲರಿಗೂ ವಿಮೆ ಮಾಡಿಸಲು ಅರಿವು ಮೂಡಿಸಬೇಕು ಎಂದರು.

ಗ್ರಾಮ ಆಡಳಿತ ಅಧಿಕಾರಿಗಳು ಜನರನ್ನು ನಗರಗಳಿಗೆ ಕರೆಸಿಕೊಳ್ಳುವುದು ನಿಲ್ಲಿಸಿ ಪ್ರತಿ ಹಳ್ಳಿಗೆ ಭೇಟಿ ನೀಡಿ ಅವರಿಗೆ ಅಗತ್ಯವಾದ ದಾಖಲೆಯನ್ನು ಗ್ರಾಮದಲ್ಲಿ ಒದಗಿಸಬೇಕು. ಗ್ರಾಮದ ಜನರು ಅಧಿಕಾರಿಗಳು ಬಂದಿಲ್ಲವೆಂದು ಹೇಳಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಖಚಿತ ಎಂದು ಎಚ್ಚರಿಸಿದರು.

ಶುದ್ಧ ಕುಡಿವ ನೀರಿನ ಘಟಕಗಳ ನಿರ್ವಹಣೆ ಮಾಡದೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವುದು ಸರಿಯಲ್ಲ. ಎಲ್ಲಿ ಘಟಕಗಳು ಕೆಟ್ಟು ಹೋಗಿವೆ, ಅದರ ನಿರ್ವಹಣೆ ಹೊಣೆ ಹೊತ್ತವರಿಗೆ ನೋಟಿಸ್ ನೀಡಬೇಕು ಎಂದು ಇಂಜಿನಿಯರ್‌ಗೆ ಸೂಚಿಸಿದರು.

ಇ ಸ್ವತ್ತು ವಿತರಣೆಯಲ್ಲಿ ಯಾವುದೇ ಲೋಪವಾಗಬಾರದು. ಗ್ರಾಮ ಪಂಚಾಯತಿ ಮಟ್ಟದಲ್ಲಿ ಸ್ಥಳಿಯರನ್ನು ಅಲೆದಾಡಿಸಿದರೆ ಸಹಿಸುವುದಿಲ್ಲ. ಕಾಲಮಿತಿಯೊಳಗೆ ಸೌಲಭ್ಯವನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಎಲ್ಲ ಜವಾಬ್ದಾರಿ ಪಿಡಿಒ ಮತ್ತು ಪಂಚಾಯತಿ ಸಿಬ್ಬಂದಿ ಮಾಡಬೇಕು ಎಂದರು.

ಹಿರಿಯ ನಾಗರಿಕರಿಗೆ, ವಿಕಲಚೇತನರಿಗೆ, ವಿಧವಾ ವೇತನ ಸೇರಿ ಎಲ್ಲ ರೀತಿಯ ಪಿಂಚಣಿಯನ್ನು ಖುದ್ದು ಮನೆಗೆ ಭೇಟಿ ನೀಡಿ ಅವರಿಗೆ ಆದೇಶ ಪತ್ರ ವಿತರಿಸಲು ಮುಂದಾಗಬೇಕು ಎಂದು ತಹಸೀಲ್ದಾರ್ ಅವರಿಗೆ ಸೂಚಿಸಿದರು.

ಉಪ ವಿಭಾಗಾಧಿಕಾರಿ ಕಾರ್ತಿಕ್, ಅಧೀನ ಕಾರ್ಯದರ್ಶಿ ಈಶ್ವರ ಪ್ರಸಾದ್, ತಹಸೀಲ್ದಾರ್ ನಾಗವೇಣಿ, ತಾಪಂ ಇಒ ಹನುಮಂತಪ್ಪ, ಬೆಳಗಟ್ಟ ಗ್ರಾಪಂ ಅಧ್ಯಕ್ಷೆ ಮಂಜುಶ್ರೀ ಪಾಲಯ್ಯ, ಉಪಾಧ್ಯಕ್ಷ ರಾಮಚಂದ್ರ ರೆಡ್ಡಿ, ಕೂನಬೇವು ಗ್ರಾಪಂ ಅಧ್ಯಕ್ಷೆ ಕವಿತಾ ನಾಗರಾಜ್, ಉಪಾಧ್ಯಕ್ಷ ಮಂಜಣ್ಣ ಇತರರಿದ್ದರು.