ಹಗರಿಬೊಮ್ಮನಹಳ್ಳಿಯಲ್ಲಿ ತಾಲೂಕು ಪಪೂ ಕಾಲೇಜ್‌ಗಳ ಉಪನ್ಯಾಸಕರ ಸಂಘದಿಂದ ದ್ವಿತೀಯ ಪಿಯು ಕಾಲೇಜ್‌ಗಳ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಮಂಗಳವಾರ ಸನ್ಮಾನಿಸಲಾಯಿತು. ಶಾಸಕ ಕೆ.ನೇಮಿರಾಜ್ ನಾಯ್ಕ, ಸಂಘದ ರಾಜ್ಯಾಧ್ಯಕ್ಷ ಎ.ಎಚ್.ನಿಂಗೇಗೌಡ, ತಾಲೂಕು ಅಧ್ಯಕ್ಷ ಗೂಳೆಪ್ಪ ಹುಲಿಮನಿ ಇತರರಿದ್ದರು. 
ಜಿಲ್ಲೆ

ಸರ್ಕಾರದ ಸೌಲಭ್ಯಗಳ ಪ್ರಯೋಜನ ಪಡೆಯಿರಿ

ನರೇಶ್ ಕುಮಾರ್

ಹಗರಿಬೊಮ್ಮನಹಳ್ಳಿ: ಮಕ್ಕಳ ಮೇಲೆ ಪಾಲಕರು ಇಟ್ಟಿರುವ ಭರವಸೆಯನ್ನು ಈಡೇರಿಸುವ ಹೊಣೆ ಅವರ ಮುಂದಿನ ಶಿಕ್ಷಣದಲ್ಲಿ ಅಡಕವಾಗಿರುತ್ತದೆ ಎಂದು ಶಾಸಕ ಕೆ.ನೇಮಿರಾಜ್ ನಾಯ್ಕ ಅಭಿಪ್ರಾಯಪಟ್ಟರು.

ಪಟ್ಟಣದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಸಭಾಂಗಣದಲ್ಲಿ ತಾಲೂಕು ಪಪೂ ಕಾಲೇಜ್‌ಗಳ ಉಪನ್ಯಾಸಕರ ಸಂಘದಿಂದ ಮಂಗಳವಾರ ಹಮ್ಮಿಕೊಂಡಿದ್ದ ದ್ವಿತೀಯ ಪಿಯು ಕಾಲೇಜ್ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣಕ್ಕೆ ಸರ್ಕಾರಗಳು ಒತ್ತು ನೀಡಿದ್ದು, ವಿದ್ಯಾರ್ಥಿಗಳಿಗೆ ಸಾಕಷ್ಟು ಸೌಲಭ್ಯಗಳಿವೆ. ಸದುಪಯೋಗ ಪಡೆದು ಉತ್ತಮ ಶಿಕ್ಷಣದೊಂದಿಗೆ ಉನ್ನತ ಹುದ್ದೆ ಅಲಂಕರಿಸಿದರೆ ಪಾಲಕರ ಕನಸು ಈಡೇರಿಸಿದಂತಾಗುತ್ತದೆ ಎಂದ ಅವರು, ಸಂಘದ ಮನವಿ ಸ್ಪಂದಿಸಿ ತಾಲೂಕು ಕೇಂದ್ರದಲ್ಲಿ ಸಭಾಂಗಣ ನಿರ್ಮಿಸುವ ಪ್ರಯತ್ನ ಮಾಡುತ್ತೇನೆ ಎಂದರು.

ಸಂಘದ ರಾಜ್ಯಾಧ್ಯಕ್ಷ ಎ.ಎಚ್.ನಿಂಗೇಗೌಡ ಮಾತನಾಡಿ, ಗುಣಮಟ್ಟದ ಶಿಕ್ಷಣ ದೊರೆಯಬೇಕೆಂದರೆ ಮೊದಲು ಖಾಲಿ ಇರುವ ಹುದ್ದೆಗಳನ್ನು ಸರ್ಕಾರ ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು.

ತಾಲೂಕು ಅಧ್ಯಕ್ಷ ಗೂಳಪ್ಪ ಹುಲಿಮನಿ ಮಾತನಾಡಿದರು. ಜೆಡಿಎಸ್ ತಾಲೂಕು ಅಧ್ಯಕ್ಷ ವೈ.ಮಲ್ಲಿಕಾರ್ಜುನ, ಜಿಲ್ಲಾ ಉಪಾಧ್ಯಕ್ಷ ಕೃಷ್ಣಮೂರ್ತಿ, ಸಂಘದ ವಿಜಯನಗರ ಜಿಲ್ಲಾಧ್ಯಕ್ಷ ಗೌಡ್ರು ಬಸವರಾಜಪ್ಪ, ಬಳ್ಳಾರಿ ಜಿಲ್ಲಾಧ್ಯಕ್ಷ ಡಾ.ಎಂ.ರಾಜಣ್ಣ, ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಕಾರ್ಯದರ್ಶಿ ಬಿ.ಬಸವನಗೌಡ್ರು, ಪ್ರಾಚಾರ್ಯ ಜೆ.ಬಿ.ಎಂ.ನಾಗಲಿಂಗಸ್ವಾಮಿ, ಡಾ.ಎಂ.ಕೆ.ದುರುಗಪ್ಪ, ಜಿ.ಮೇಘನಾ ಇದ್ದರು.