ಜಿಲ್ಲೆ

ಸರ್ಕಾರ ಎಂದರೆ ಅಕ್ಷಯ ಪಾತ್ರೆಯಲ್ಲ: ಡಾ.ಸುಧಾಕರ್

madikerimailmanju

ಚಿಕ್ಕಮಗಳೂರು: ಸರ್ಕಾರ ಎಂದರೆ ಅಕ್ಷಯ ಪಾತ್ರೆಯಲ್ಲ. ಅದಕ್ಕೂ ಆರ್ಥಿಕ ಇತಿಮಿತಿಗಳಿವೆ. ಕರೊನಾ ಸಂಕಷ್ಟದ ನಡುವೆ ಎಲ್ಲ ಆರ್ಥಿಕ ಚಟುವಟಿಕೆ ಕಡಿಮೆಯಾಗಿ ಎಲ್ಲ ರೀತಿಯಲ್ಲಿ ಹಣ ಕ್ರೂಢೀಕರಣಕ್ಕೆ ಕಷ್ಟವಾಗಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಸುದ್ದಿಗಾರರ ಜತೆ ಮಾತನಾಡಿದ ವೇಳೆ, ವಿದ್ಯುತ್ ಶುಲ್ಕ ಪರಿಷ್ಕರಣೆ ಬಗ್ಗೆ ಸಮರ್ಥಿಸಿ, ಯಾವ ಸರ್ಕಾರವೂ ಸಂತೋಷದಿಂದ ಬೆಲೆ ಹೆಚ್ಚಳ ಮಾಡುವುದಿಲ್ಲ. ಮುಖ್ಯಮಂತ್ರಿಗಳು ಎಲ್ಲವುಗಳ ಬಗ್ಗೆ ಚಿಂತನೆ ನಡೆಸಿ ಈ ತೀರ್ಮಾನ ಕೈಗೊಂಡಿದ್ದಾರೆ. ಜನರು ಸಹಕರಿಸಬೇಕು ಕರೊನಾ ಹಾಗೂ ಅತೀವೃಷ್ಟಿಯಿಂದ ತಲೆದೋರಿರುವ ಆರ್ಥಿಕ ಸಂಕಷ್ಟದ ಅನಿವಾರ್ಯತೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದರು.

ಅತಿವೃಷ್ಟಿಯಿಂದ ಸಾವಿರಾರು ಕೋಟಿ ರೂ.ಹಾನಿ

ಕಳೆದ 8 ತಿಂಗಳಿನಿಂದ ರಾಜ್ಯದ 6 ಕೋಟಿ ಜನರಿಗೆ ವಿವಿಧ ರೀತಿಯಲ್ಲಿ ಕರೊನಾ ನಿರ್ವಹಣೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಒಂದೇ ವರ್ಷ ಎರಡು ಬಾರಿ ಅತೀವೃಷ್ಟಿ ಸಂಭವಿಸಿ ಸಾವಿರಾರು ಕೋಟಿ ರೂ. ನಷ್ಟವಾಗಿದೆ. ಈ ನಡುವೆ ಸರ್ಕಾರದ ಎಲ್ಲ ಸಿಬ್ಬಂದಿಗೆ ಪರಿಪೂರ್ಣ ವೇತನ ಪಾವತಿ ಜತೆಗೆ ಸರ್ಕಾರ ಅಭಿವೃದ್ಧಿ ಕಾರ್ಯ ಕೈಗೊಂಡಿದೆ ಎಂದು ಹೇಳಿದರು.

ಕೆಎಸ್‍ಆರ್‍ಟಿಸಿಗೆ ಕಳೆದ 8 ತಿಂಗಳಿನಿಂದ ನೂರಾರು ಕೋಟಿ ರೂ. ನಷ್ಟವಾಗಿದೆ. ಹಾಗೆಂದು ಬಸ್ ಸಂಚಾರ ಸ್ಥಗಿತಗೊಳಿಸಿಲ್ಲ. ಕಠಿಣ ಪರಿಸ್ಥಿತಿಯಲ್ಲೂ ಸಹ ಬಸ್‍ಗಳನ್ನು ಓಡಿಸಲಾಗುತ್ತಿದೆ ಎಂದರು.

ಜನರ ಆರೋಗ್ಯಕ್ಕಾಗಿ ಪಟಾಕಿ ನಿಷೇಧ

ಜನಜೀವನ ಮತ್ತು ಆರೋಗ್ಯವೇ ಸರ್ಕಾರಕ್ಕೆ ಮುಖ್ಯವಾಗಿರುವ ಹಿನ್ನೆಲೆಯಲ್ಲಿ ಈ ಬಾರಿ ಪಟಾಕಿ ನಿಷೇಧ ಮಾಡಲಾಗಿದೆ. ಪಟಾಕಿ ತಯಾರಕರು ಮತ್ತು ವರ್ತಕರಿಗೆ ಈ ವಿಚಾರ ಮೊದಲೇ ಗೊತ್ತಿರಬೇಕಿತ್ತು. ಕೆಲವರ ಲಾಭಕ್ಕಾಗಿ ಕೋಟ್ಯಂತರ ಜನರ ಆರೋಗ್ಯ ನಿರ್ಲಕ್ಷಿಸಲಾಗದು. ಸ್ಥಳೀಯವಾಗಿ ಕೆಲವಡೆ ಪಟಾಕಿ ಮಾರಾಟಕ್ಕೆ ಈಗಾಗಲೇ ಅನುಮತಿ ನೀಡಿರಬಹುದು. ಆದರೆ ಪಟಾಕಿ ನಿಷೇಧ ನಿರ್ಧಾರ ರಾಜ್ಯಮಟ್ಟದಲ್ಲಿ ಆಗಿರುವ ತೀರ್ಮಾನ ಎಲ್ಲರೂ ಅದಕ್ಕೆ ಬದ್ಧರಾಗಬೇಕು ಎಂದು ಸಲಹೆ ನೀಡಿದರು.

ಮತಾಂತರ ನಿಷೇಧ ಕಾಯ್ದೆ ತಂದೇ ತರುತ್ತೇವೆ

ಲವ್ ಜಿಹಾದ್‍ಗೆ ಕಡಿವಾಣ ಹಾಕಲು ಮತಾಂತರ ನಿಷೇಧ ಕಾಯ್ದೆ ತಂದೇ ತೀರುತ್ತೇವೆ. ಮುಂದಿನ ಅ„ವೇಶನದಲ್ಲಿ ಈ ಪ್ರಕ್ರಿಯೆ ನಡೆಯಲಿದೆ. ಈ ಬಗ್ಗೆ ಅವರಿವರಿಂದ ಹೇಳಿಸಿಕೊಳ್ಳುವುದೇನೂ ಇಲ್ಲ. ಈ ಬಗ್ಗೆ ಎಲ್ಲಾ ಹಂತದಲ್ಲಿ ಚರ್ಚೆಗಳು ನಡೆದಿವೆ ಎಂದು ಹೇಳಿದರು.

ಡಯಾಲಿಸಿಸ್ ಘಟಕಗಳ ವಿಚಾರದಲ್ಲಿ ಯಾರೂ ಆತಂಕ ಅನಗತ್ಯ. ಈ ಹಿಂದೆ ಪಿಪಿಪಿ ಮಾದರಿಯಲ್ಲಿ ಎರಡು ಕಂಪನಿಗಳಿಗೆ ಡಯಾಲಿಸಿಸ್ ಕೇಂದ್ರಗಳ ನಿರ್ವಹಣೆ ಜವಾಬ್ದಾರಿ ವಹಿಸಲಾಗಿತ್ತು. ಅವುಗಳಲ್ಲಿ ವಿ.ಆರ್.ಶೆಟ್ಟಿ ಹೆಸರಿನ ಸಂಸ್ಥೆ ನಷ್ಟ ಅನುಭವಿಸಿದೆ. ಕಳೆದ 15 ದಿನಗಳಿಂದ ಅದು ಇನ್ನಷ್ಟು ಹೆಚ್ಚಾಗಿದೆ. ಸದ್ಯಕ್ಕೆ ಆಸ್ಪತ್ರೆಗಳ ಬಳಕೆದಾರರ ನಿಧಿಯಿಂದ ನಿರ್ವಹಿಸಲಾಗುತ್ತಿದೆ. ಇಷ್ಟರಲ್ಲೇ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಬಡ ರೋಗಿಗಳಿಗೆ ತೊಂದರೆಯಾಗದಂತೆ ಗಮನ ಹರಿಸಲಾಗುವುದು ಎಂದರು.