ಜಿಲ್ಲೆ

ಆಸ್ಪತ್ರೆಗಳಲ್ಲಿ ನೀಡದ ಪ್ರವೇಶ: ಕೋವಿಡ್‌ ವಾರಿಯರ್‌ ವೈದ್ಯ ಕರೊನಾಕ್ಕೆ ಬಲಿ!

ಬೆಂಗಳೂರು: ಕರೊನಾ ವಾರಿಯರ್ಸ್‌ ಎಂದು ವೈದ್ಯರನ್ನು ಬಣ್ಣಿಸಲಾಗುತ್ತಿದೆ. ಆದರೆ ಇಲ್ಲೊಂದು ದುರದೃಷ್ಟಕರ ಘಟನೆಯಲ್ಲಿ ಸರ್ಕಾರಿ ವೈದ್ಯರೇ ಕರೊನಾಕ್ಕೆ ಬಲಿಯಾಗಿದ್ದಾರೆ, ಅದೂ ಆಸ್ಪತ್ರೆಗಳಲ್ಲಿ ಅವರಿಗೆ ಪ್ರವೇಶ ನೀಡದ ಕಾರಣದಿಂದ! ಕೋವಿಡ್ 19 ವರದಿ ಇಲ್ಲದ ಕಾರಣದಿಂದಾಗಿ ಅವರನ್ನು ಮೂರು ಆಸ್ಪತ್ರೆಗಳಲ್ಲಿ ಪ್ರವೇಶ ನಿರಾಕರಿಸಲಾಗಿತ್ತು.

ರಾಮನಗರ ಜಿಲ್ಲೆಯಲ್ಲಿರುವ ರಾಜ್ಯ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಾ.ಮಂಜುನಾಥ್‌ ಅವರು ಮೃತಪಟ್ಟಿದ್ದಾರೆ. ಇನ್ನೂ ವಿಷಾದದ ಸಂಗತಿ ಎಂದರೆ, ಡಾ. ಮಂಜುನಾಥ್ ಅವರ ಸಂಬಂಧಿಕರಾಗಿರುವ ನಾಗೇಶ್ ಎನ್ನುವವರು ಬಿಬಿಎಂಪಿ ವೈದ್ಯರಾಗಿದ್ದು, ಹಾಸಿಗೆ ಹಂಚುವ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಅದರೆ ಅವರು ಕೂಡ ಏನೂ ಮಾಡಲು ಆಗಿಲ್ಲ ಎನ್ನಲಾಗಿದೆ.

ಇವರು ಕೆಲವು ದಿನಗಳಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಕಳೆದ ತಿಂಗಳಾಂತ್ಯದಲ್ಲಿ ಜೆಪಿ ನಗರದಲ್ಲಿರುವ ರಾಜಶೇಖರ ಆಸ್ಪತ್ರೆ, ಕೆಂಗೇರಿಯಲ್ಲಿರುವ ಬಿಜಿಎಸ್ ಗ್ಲೋಬಲ್ ಆಸ್ಪತ್ರೆ ಹಾಗೂ ಕುಮಾರಸ್ವಾಮಿ ಲೇ ಔಟ್ ನಲ್ಲಿರುವ ಸಾಗರ ಆಸ್ಪತ್ರೆಗೆ ಅಲೆದಾಡಿದ್ದಾರೆ. ಆದರೆ ಕರೊನಾ ಪರೀಕ್ಷೆ ಮಾಡಿಸಿಕೊಂಡಿರದ ಹಿನ್ನೆಲೆಯಲ್ಲಿ ಆಸ್ಪತ್ರೆಗಳು ‍ಪ್ರವೇಶ ನಿರಾಕರಿಸಿದ್ದವು ಎನ್ನಲಾಗಿದೆ.

ನಂತರ ಸಂಬಂಧಿಕರು ಪ್ರತಿಭಟನೆ ಮಾಡಿದಾಗ ಸಾಗರ ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಯಿತು. ಆದರೆ ಅಲ್ಲಿಂದ ಅವರನ್ನು ಅವರನ್ನು ಅಲ್ಲಿಂದ ಮೆಡಿಕಲ್ ಕಾಲೇಜ್ ಆ್ಯಂಡ್ ರಿಸರ್ಚ್ ಇನ್ಸ್ ಸ್ಟಿಟ್ಯೂಟ್‌ಗೆ ಶಿಫ್ಟ್ ಮಾಡಲಾಗಿತ್ತು. ಅವರಿಗೆ ಪ್ಲಾಸ್ಮಾ ಥೆರಪಿ ಅಗತ್ಯವಿದೆ ಎಂದು ಜುಲೈ 9ರಂದು ಡಿಸ್‌ಚಾರ್ಜ್‌ ಮಾಡಿಬಿಟ್ಟಿದ್ದರು. ಇದೀಗ ಅವರು ಮೃತಪಟ್ಟಿರುವುದಾಗಿ ಕುಟುಂಬಸ್ಥರು ಹೇಳಿದ್ದಾರೆ.

ಡಾ. ಮಂಜುನಾಥ್ ಅವರನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ ಆಸ್ಪತ್ರೆಗಳ ವಿರುದ್ಧ ಆರೋಗ್ಯ ಇಲಾಖೆ ಕ್ರಮಕೈಗೊಳ್ಳುತ್ತದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಡಿ. ರಂದೀಪ್ ಹೇಳಿದ್ದಾರೆ.