ಮಧು ಬಂಗಾರಪ್ಪ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ.  
ಜಿಲ್ಲೆ

ಸರ್ಕಾರ ಅಸ್ಥಿರಗೊಳಿಸುವ ಹುನ್ನಾರ: ಮಧು ಆಕ್ರೋಶ

ಅರವಿಂದ ಅಕ್ಲಾಪುರ

ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಅವರ ಗ್ಯಾಂಗ್ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರದ ಭಾಗವಾಗಿ ಮೈಸೂರಿಗೆ ಪಾದಯಾತ್ರೆ ಆರಂಭಿಸಿದೆ. ಇದೇ ಪಾದಯಾತ್ರೆ ಅವರಿಗೆ ತಿರುಗುಬಾಣವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಮೈಸೂರು ಪಾದಯಾತ್ರೆ ಬಿಜೆಪಿ, ಜೆಡಿಎಸ್ ನಾಯಕರ ಕರ್ಮಕಾಂಡಗಳ ಬಯಲಿಗೆ ಎಳೆಯಲು ಅವಕಾಶ ಒದಗಿಸಿದೆ. ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಪಾತ್ರ ಇಲ್ಲದಿದ್ದರೂ ತನಿಖೆಗೆ ಆದೇಶ ನೀಡಲಾಗಿದೆ. ಆದರೂ ಬಿಜೆಪಿ, ಜೆಡಿಎಸ್ ನಾಯಕರು ಪಾದಯಾತ್ರೆ ಮೂಲಕ ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು.
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪಾದಯಾತ್ರೆ ಬಗ್ಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯತ್ನಾಳ್ ಬಗ್ಗೆ ಮಾತನಾಡದ ವಿಜಯೇಂದ್ರ ಅವರು ಸಿಎಂ ಹಾಗೂ ಡಿಸಿಎಂ ಬಗ್ಗೆ ಮಾತನಾಡುತ್ತಿದ್ದಾರೆ. ಬಿಜೆಪಿ ಅಧಿಕಾರದಲ್ಲಿದ್ದ ವೇಳೆ ಮುಡಾದಿಂದ ನಿವೇಶನ ನೀಡಲಾಗಿತ್ತು. ಎಲ್ಲ ಪಕ್ಷದವರೂ ಆ ವೇಳೆ ನಿವೇಶನ ಪಡೆದಿದ್ದಾರೆ ಎಂದು ಹೇಳಿದರು.
ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದಿಂದ ವಾಜಪೇಯಿ ಬಡಾವಣೆಯಲ್ಲಿ ನಿವೇಶನ ಹಂಚಿರುವುದರಲ್ಲಿ ಭ್ರಷ್ಟಾಚಾರವಾಗಿದೆ. ಇದರ ತನಿಖೆಗೆ ನಾನು ಒತ್ತಾಯಿಸುತ್ತಿದ್ದೇನೆ. ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿಯುವ ಮುನ್ನ ಈ ಪ್ರಕರಣವನ್ನು ಹಿಂದಕ್ಕೆ ಪಡೆದಿದ್ದರು. ನಾವು ಇದನ್ನು ಬಿಡುವುದಿಲ್ಲ. ಸೂಡಾ ಮಾತ್ರವಲ್ಲದೆ ಶಿವಮೊಗ್ಗ ವಿಮಾನ ನಿಲ್ದಾಣ, ಸ್ಮಾರ್ಟ್ ಸಿಟಿ ಯೋಜನೆಯಲ್ಲೂ ಹಗರಣಗಳಾಗಿವೆ. ಅದೆಲ್ಲವನ್ನೂ ಸರ್ಕಾರ ಹೊರಗೆಳೆಯಲಿದೆ ಎಂದು ಮಧು ಬಂಗಾರಪ್ಪ ತಿಳಿಸಿದರು.
ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಮಾಜಿ ಎಂಎಲ್‌ಸಿ ಆಯನೂರು ಮಂಜುನಾಥ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್. ಪ್ರಸನ್ನಕುಮಾರ್, ಸೂಡಾ ಮಾಜಿ ಅಧ್ಯಕ್ಷ ಎನ್.ರಮೇಶ್, ಪಾಲಿಕೆ ಮಾಜಿ ಸದಸ್ಯರಾದ ರಮೇಶ್ ಹೆಗ್ಡೆ, ಯಮುನಾ ರಂಗೇಗೌಡ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.