ಶಿರಸಿ: ಅರಣ್ಯ ಭೂಮಿ ಹಕ್ಕು ಕಾಯ್ದೆಗೆ ತಿದ್ದುಪಡಿ ತರಬೇಕೆಂದು ಇತ್ತೀಚಿನ ಚರ್ಚೆ ಮತ್ತು ವಿಧಾನ ಮಂಡಲ ಸದನ ತೆಗೆದುಕೊಂಡ ನಿರ್ಣಯಗಳು ಗೊಂದಲಕ್ಕೆ ಕಾರಣವಾಗಿವೆ. ಅರಣ್ಯವಾಸಿಗಳ ಪರವಾಗಿಯೇ ಕಾಯ್ದೆ ಇದ್ದು, ತಿದ್ದುಪಡಿ ಅವಶ್ಯಕವಿಲ್ಲ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಅರಣ್ಯ ಹಕ್ಕು ಕಾಯ್ದೆ ಮತ್ತು ನಿಯಮಾವಳಿ ಜಾರಿಗೆ ಬಂದು 17-18 ವರ್ಷಗಳ ನಂತರ, ಜಿಲ್ಲೆಯಲ್ಲಿ ಈ ಕಾನೂನು ಅಡಿಯಲ್ಲಿ ಈ ಹಿಂದೆ ಸಾಗುವಳಿ ಹಕ್ಕು ಪತ್ರ ನೀಡಿದ ನಂತರ ಈಗ ಕಾಯ್ದೆಗೆ ತಿದ್ದುಪಡಿ ಕುರಿತು ಪ್ರಸ್ತಾಪವಾಗುತ್ತಿರುವುದು ವಿಷಾದಕರ ಎಂದಿದ್ದಾರೆ.
ಅರಣ್ಯ ಹಕ್ಕಿಗೆ ಸಂಬಂಧಿಸಿ ನಿರ್ದಿಷ್ಟ ದಾಖಲಾತಿಗಳ ಸಾಕ್ಷ್ಯಗಳನ್ನು ಆಧರಿಸಲು ಒತ್ತಾಯಿಸತಕ್ಕದ್ದಲ್ಲ. ಕಾನೂನಿನ ತಿದ್ದುಪಡಿಗೆ ಕೇಂದ್ರ ಸರ್ಕಾರ ಅರಣ್ಯ ಹಕ್ಕು ಕಾಯ್ದೆ ಜಾರಿಗೆ ತಂದು 12 ವರ್ಷಗಳಾದರೂ ಮತ್ತು ಅರಣ್ಯ ವಾಸಗಳ 3 ತಲೆಮಾರಿನ ವೈಯಕ್ತಿಕ ಅತಿಕ್ರಮಣದ ದಾಖಲೆಯನ್ನು ಮಂಜೂರಿಗೆ ಪರಿಗಣಿಸುವುದು ತಪ್ಪು. ಅತಿಕ್ರಮಣ ಪ್ರದೇಶ 3 ತಲೆಮಾರಿನ ಜನವಸತಿ ಪ್ರದೇಶ ಎಂಬ ದಾಖಲೆಯ ಆಧಾರದ ಮೇಲೆ ಹಕ್ಕು ಪತ್ರ ನೀಡಬಹುದೆಂದು ಕಳೆದ 10 ವರ್ಷಗಳ ಹಿಂದೆ ಕೇಂದ್ರ ಸರ್ಕಾರ ನಿರ್ದೇಶಿಸಿ ಮಂಜೂರಿಗಿರುವ ಕಾನೂನು ತೊಡಕುಗಳನ್ನು ನಿವಾರಿಸಿದೆ ಎಂದು ಅವರು ತಿಳಿಸಿದ್ದಾರೆ.
ಅರಣ್ಯ ಭೂಮಿ ಹಕ್ಕಿನ ಮೂಲಕ ಅತಿಕ್ರಮಣದಾರರಿಗೆ ನ್ಯಾಯ ನೀಡಲು ಜನಪ್ರತಿನಿಧಿಗಳಿಗೆ ಆಡಳಿತಾತ್ಮಕ ಇಚ್ಛಾಶಕ್ತಿ ಹಾಗೂ ಅಧಿಕಾರಿಗಳನ್ನು ನಿಯಂತ್ರಿಸುವ, ಆಳವಾದ ಕಾನೂನು ಅಧ್ಯಯನ ಅವಶ್ಯ. ರವೀಂದ್ರ ನಾಯ್ಕ, ಅರಣ್ಯ ಭೂಮಿ ಹಕ್ಕು ಹೋರಾಟಗಾರ ವೇದಿಕೆಯ ಅಧ್ಯಕ್ಷ