ಜಿಲ್ಲೆ

'ಕೋಡಿಹಳ್ಳಿ ಚೈನಾ ಮಾಡೆಲ್, ಸಾರಿಗೆ ನೌಕರರನ್ನು ಎತ್ತಿಕಟ್ಟುವ ಆತನನ್ನು ಬಂಧಿಸಬೇಕು'

ತುಮಕೂರು: ಕೋಡಿಹಳ್ಳಿ ಚಂದ್ರಶೇಖರ್ ಚೈನಾ ಮಾಡೆಲ್. ಆತ ಉತ್ತರ ಕೊರಿಯಾ, ಚೀನಾದಿಂದ ಬಂದು ಸಾರಿಗೆ ನೌಕರರ ಜತೆ ಹೋರಾಟಕ್ಕೆ ಸೇರಿಕೊಂಡಿದ್ದಾನೆ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಸೊಗಡುಶಿವಣ್ಣ ಲೇವಡಿ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೊಗಡು ಶಿವಣ್ಣ, ಕರೊನಾ ಸಂದರ್ಭದಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾಗ ಅವರ ಬೆಂಬಲಕ್ಕೆ ನಿಲ್ಲದ ಈ ಕೋಡಿಹಳ್ಳಿ, ರಾತ್ರೋರಾತ್ರಿ ಉದ್ಭವಿಸಿ ಸಾರಿಗೆ ನೌಕರರನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಈತನಿಗೆ ಕಾಣಿಸುತ್ತಿಲ್ಲವೇ? ನೌಕರರ ಪರ ಹೋರಾಟ ಮಾಡಲು ಈತ ಯಾರು? ಎಂದು ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡರು.

ಹತ್ತುಬೇಡಿಕೆಗಳಲ್ಲಿ ಒಂಭತ್ತು ಬೇಡಿಕೆ ಈಡೇರಿಸಲಾಗಿದೆ. ಆದರೂ, ನೌಕರರು ಈ ರೀತಿ ಪಟ್ಟುಹಿಡಿದಿರುವುದು ಸರಿಯಲ್ಲ. ಕೋಡಿಹಳ್ಳಿ ರೈತಾಪಿಗಳ ಪರ ಹೋರಾಟ ಮತ್ತು ಬೆಂಬಲಕ್ಕೆ ನಿಲ್ಲುವುದನ್ನು ಬಿಟ್ಟು ಸಾರಿಗೆ ನೌಕರರ ಹೋರಾಟಕ್ಕೆ ಇಳಿದಿರುವುದರಲ್ಲಿ ಅರ್ಥವಿಲ್ಲ. ಸರ್ವಾಧಿಕಾರಿಯಂತೆ ವರ್ತಿಸುತ್ತಿರುವ ಕೋಡಿಹಳ್ಳಿಯನ್ನು ಮೊದಲು ಬಂಧಿಸಬೇಕು ಎಂದು ಸೊಗಡುಶಿವಣ್ಣ ಒತ್ತಾಯಿಸಿದರು.

ಸಾರಿಗೆ ನೌಕರರ ಹಲವು ಬೇಡಿಕೆ ಈಡೇರಿಸಲು ಸರ್ಕಾರ ನಿನ್ನೆ ಒಪ್ಪಿಕೊಂಡಿತ್ತು. ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಮತ್ತೆ ಹಠ ಹಿಡಿದಿರುವ ಕಾರಣ ಪ್ರತಿಭಟನೆ ಮುಂದುವರಿಸಿರುವುದು ಸರಿಯಲ್ಲ ಎಂದರು.