ಜಿಲ್ಲೆ

ಕಾರ್ಕಳಕ್ಕೆ ಸರ್ಕಾರಿ ಬಸ್ ಸೇವೆ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಕಾರ್ಕಳ

ಪಡುಬಿದ್ರೆ ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ದಿನನಿತ್ಯ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರಿ ಬಸ್ ಓಡಾಡುವಂತೆ ತಹಸೀಲ್ದಾರ್ ನಿರ್ಧಾರ ಕೈಗೊಂಡಿದ್ದು, ಹಲವು ವರ್ಷಗಳ ಕನಸು ನನಸಾಗಿದೆ. ತಹಸೀಲ್ದಾರ್ ಡಾ.ಪ್ರತಿಭಾ ಆರ್. ಅಧ್ಯಕ್ಷತೆಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ತಾಲೂಕಿನ ಜನ, ವಿದ್ಯಾರ್ಥಿಗಳ ಬೇಡಿಕೆಗೆ ಸ್ಪಂದಿಸಿ ಸರ್ಕಾರಿ, ಖಾಸಗಿ ಬಸ್‌ಗಳ ಸಂಖ್ಯೆ ಹೆಚ್ಚಿಸುವಂತೆ ಸೂಚಿಸಿದರು.

ವಿದ್ಯಾರ್ಥಿಗಳು ಸಂಚಾರಿ ನಿಯಮ ಉಲ್ಲಂಘಿಸಬಾರದು. ಬಸ್ ಬಾಗಿಲಿನಲ್ಲಿ ನೇತಾಡಬಾರದು. ಯಾವುದೇ ಸಮಸ್ಯೆ ಇದ್ದರೂ ಆರೋಗ್ಯಕರ ಚರ್ಚೆ, ಸಭೆಗಳ ಮೂಲಕ ಬಗೆಹರಿಸಿಕೊಳ್ಳೋಣ. ಅನಗತ್ಯವಾಗಿ ಮುಷ್ಕರ ಕೈಗೊಳ್ಳಬಾರದು. ತಾಲೂಕು ಆಡಳಿತ ವಿದ್ಯಾರ್ಥಿಗಳ, ಸಾರ್ವಜನಿಕರ ಹಿತಕ್ಕಾಗಿ ಕರ್ತವ್ಯ ನಿರ್ವಹಿಸಲು ಸನ್ನದ್ಧವಾಗಿದೆ ಎಂದು ತಹಸೀಲ್ದಾರ್ ಕಿವಿಮಾತು ಹೇಳಿದರು.

ಕೆಎಸ್‌ಆರ್‌ಟಿಸಿ ಡಿವಿಷನಲ್ ಕಂಟ್ರೋಲರ್ ರಾಜೇಶ್ ಶೆಟ್ಟಿ, ಆರ್‌ಟಿಒ ಅಧಿಕಾರಿ ನಾಯಕ್, ಆರಕ್ಷಕರಾದ ಮಂಜಪ್ಪ, ಅಶೋಕ್, ಕೆನರಾ ಬಸ್ ಅಸೋಸಿಯೇಷನ್ ಅಧ್ಯಕ್ಷ, ಹಲವು ಬಸ್ ಮಾಲೀಕರು, ಎಬಿವಿಪಿ ವಿದ್ಯಾರ್ಥಿ ಸಂಘಟನೆ ನಾಯಕ ಗಣೇಶ್ ಪೂಜಾರಿ ಮುಂತಾದವರು ಹಾಜರಿದ್ದರು.

ವಿಜಯವಾಣಿ ವರದಿ ಪರಿಣಾಮ

ಕಾರ್ಕಳ ಪಡುಬಿದ್ರೆ ರಾಜ್ಯ ಹೆದ್ದಾರಿಯಲ್ಲಿ ನಿತ್ಯ ವಿದ್ಯಾರ್ಥಿಗಳು ಜೀವಭಯದಲ್ಲೇ ಓಡಾಡುತ್ತಿದ್ದು, ಈ ಭಾಗದಲ್ಲಿ ಸರ್ಕಾರಿ ಬಸ್‌ಗಳು ಓಡಾಟ ನಡೆಸಬೇಕು ಎನ್ನುವ ಸಮಗ್ರ ವರದಿ ಪ್ರಕಟಿಸಿದ ಬೆನ್ನಲ್ಲೆ ಈ ಭಾಗದ ರಾಜ್ಯ ಹೆದ್ದಾರಿಯಲ್ಲಿ ಸರ್ಕಾರಿ ಬಸ್ ಓಡಾಟಕ್ಕೆ ತಾಲೂಕು ಆಡಳಿತ ಮಹತ್ವದ ನಿರ್ಧಾರ ಕೈಗೊಂಡಿದೆ.

ಕೈಗೊಂಡ ಮಹತ್ವದ ನಿರ್ಧಾರ

ಉಡುಪಿ, ಪಡುಬಿದ್ರೆ, ನಿಟ್ಟೆ, ಕಾರ್ಕಳ ಮಾರ್ಗವಾಗಿ ಬೆಳಗ್ಗೆ 9 ಗಂಟೆಗೆ ಸರ್ಕಾರಿ ಬಸ್ ಓಡಿಸಲಾಗುವುದು. ನಂತರ ಸಂಜೆ ಕಾಲೇಜು ಮುಗಿಯುವ ಸಮಯಕ್ಕೆ ಸರ್ಕಾರಿ ಬಸ್ ಮತ್ತೆ ಚಲಿಸಲಾಗುವುದು. ಇದರಿಂದ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಈ ಕುರಿತು ಕೆಎಸ್‌ಆರ್‌ಟಿಸಿಯ ಡಿವಿಷನಲ್ ಕಂಟ್ರೋಲರ್ ಅವರಿಗೆ ತಹಸೀಲ್ದಾರ್ ಪ್ರತಿಭಾ ಸೂಚನೆ ನೀಡಿ 10 ದಿನದೊಳಗೆ ಸರ್ಕಾರಿ ಬಸ್ ಸಂಚಾರಕ್ಕೆ ಸಿದ್ಧವಾಗಬೇಕು ಎಂದು ತಿಳಿಸಿದ್ದಾರೆ. ಖಾಸಗಿ ಬಸ್‌ಗಳ ಮಾಲೀಕರು ಪರ್ಮಿಟ್ ನವೀಕರಿಸಿಕೊಂಡು ರಸ್ತೆಗೆ ಇಳಿದು ಸಾರ್ವಜನಿಕರ ಉಪಯೋಗಕ್ಕೆ ಬರುವಂತೆ ಆಗಬೇಕೆಂದು ಸೂಚನೆ ನೀಡಿಡಿದರು. ಸಂಚಾರಿ ನಿಯಮ ಉಲ್ಲಂಘಿಸಿ ಫುಟ್‌ಬೋರ್ಡ್ ಮೇಲೆ ನೇತಾಡಿಕೊಂಡು ಹೋಗುವ ವಿದ್ಯಾರ್ಥಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಮದು ಪೊಲೀಸರಿಗೆ ಸೂಚಿಸಿದರು.

ಕರಾವಳಿ ಭಾಗದಲ್ಲಿ ಖಾಸಗಿ ಬಸ್‌ಗಳೇ ಹೆಚ್ಚು ಸಂಚರಿಸುತ್ತವೆ. ಇಲ್ಲಿ ಸರ್ಕಾರಿ ಬಸ್‌ಗಳು ಸಂಚರಿಸಬೇಕು ಎನ್ನುವುದು ಬಹಳಷ್ಟು ಸಾರ್ವಜನಿಕರ ಬೇಡಿಕೆಯಾಗಿತ್ತು. ಜತೆಗೆ ವಿದ್ಯಾರ್ಥಿಗಳಿಗೆ ನಿತ್ಯ ಶಾಲಾ ಕಾಲೇಜು ತೆರಳಲು ಬಸ್ಸಿನ ಸಮಸ್ಯೆ ಇರುವುದನ್ನು ಮನಗಂಡು ವಿದ್ಯಾರ್ಥಿಗಳಿಗೆ ಕೊಟ್ಟ ಮಾತಿನಂತೆ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.-ಡಾ.ಪ್ರತಿಭಾ ಆರ್. ಕಾರ್ಕಳ ತಹಸೀಲ್ದಾರ್
ನಾವು ನಿತ್ಯ ಬಸ್‌ನಲ್ಲಿ ಪ್ರಾಣ ಭಯದಲ್ಲೇ ಓಡಾಡುವ ಅನಿವಾರ್ಯವಿತ್ತು. ಇದೀಗ ತಹಸೀಲ್ದಾರ್ ಕೈಗೊಂಡ ನಿರ್ಧಾರದಿಂದ ನಿಟ್ಟುಸಿರು ಬಿಡುವಂತಾಗಿದೆ. ಆದಷ್ಟು ಶೀಘ್ರ ಸರ್ಕಾರಿ, ಹೆಚ್ಚುವರಿ ಖಾಸಗಿ ಬಸ್‌ಗಳು ರಸ್ತೆಗೆ ಇಳಿದು ಜನರ ಉಪಯೋಗಕ್ಕೆ ಬರುವಂತಾಗಲಿ.-ಪ್ರಣತಿ ವಿದ್ಯಾರ್ಥಿನಿ