ಜಿಲ್ಲೆ

ಭಕ್ತರಿಂದ ಗೋವಿಂದ ನಾಮಸ್ಮರಣೆ, ವೈಕುಂಠ ದ್ವಾರ ಪ್ರವೇಶಿಸಿದವರಲ್ಲಿ ಕೃತಾರ್ಥ ಭಾವ, ವಿವಿಧೆಡೆ ದೇವರಿಗೆ ವಿಶೇಷ ಪೂಜೆ

Bengaluru Rural

ನೆಲಮಂಗಲ: ನಗರದ ವೀವರ್ಸ್‌ ಕಾಲನಿ ಶ್ರೀ ಲಕ್ಷ್ಮೀವೆಂಕಟೇಶ್ವರ ಸ್ವಾಮಿ ಮತ್ತು ಶಮಿಗಿರಿ ಕ್ಷೇತ್ರವೆಂದೆ ಪುರಾಣ ಪ್ರಸಿದ್ಧವಾಗಿರುವ ಬಸವನಹಳ್ಳಿ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇಗುಲಗಳಲ್ಲಿ ವೈಕುಂಠ ಏಕಾದಶಿ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.

ಶುಕ್ರವಾರ ಬೆಳಗಿನ ಜಾವದಿಂದಲೇ ದೇವಾಲಯಕ್ಕೆ ಭೇಟಿ ನೀಡಿದ ಸಹಸ್ರಾರು ಭಕ್ತರು ಶ್ರೀ ಲಕ್ಷ್ಮೀವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು, ಗೋವಿಂದನ ನಾಮಸ್ಮರಣೆಯಲ್ಲಿ ಮಿಂದೆದ್ದರು. ಹಲವೆಡೆ ಬೆಳಗ್ಗೆ 4 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಹಮ್ಮಿಕೊಂಡ ಪೂಜೆಯಲ್ಲಿ ಸರತಿ ಸಾಲಿನಲ್ಲಿ ನಿಂತ ಭಕ್ತರು ದೇವರ ದರ್ಶನ ಪಡೆದರು.

ಪ್ರತಿ ವರ್ಷದಂತೆ ವಿಕಾರಿನಾಮ ಸಂವತ್ಸರ ದಕ್ಷಿಣಾಯನ ಹೇಮಂತ ಋತು, ಪೌಷ ಮಾಸದ ಶುದ್ಧ ವೈಕುಂಠ ಏಕಾದಶಿ ಮಹೋತ್ಸದ ಪ್ರಯುಕ್ತ ದೇವಾಲಯಗಳಲ್ಲಿನ ಮಹಾಗಣಪತಿ, ಶ್ರೀ ಲಕ್ಷ್ಮೀ ವೆಂಕಟೇಶ್ವರ, ಲಕ್ಷ್ಮೀವೆಂಕರಮಣ ದೇವರಿಗೆ ಆಭರಣ ಹಾಗೂ ವಿಶೇಷ ಹೂವಿನ ಅಲಂಕಾರ ಮಾಡಿ ಜತೆಗೆ ಸುಪ್ರಭಾತ ಸೇವೆ, ಧೂಪ ದೀಪ, ಚಾಮರ, ವ್ಯಂಜನ ಸೇವೆ ಅಭಿಷೇಕಗಳಂತಹ ವಿಶೇಷ ಪೂಜೆ ನೆರವೇರಿಸಲಾಯಿತು.

ಆಕರ್ಷಕ ವೈಕುಂಠ ದ್ವಾರ: ಏಕಾದಶಿ ದಿನ ವೈಕುಂಠದ ಉತ್ತರ ದ್ವಾರದಿಂದ ಪ್ರವೇಶಿಸುವ ಸಕಲ ದೇವಾನುದೇವತೆಗಳು ಶ್ರೀ ಮಹಾಲಕ್ಷ್ಮೀ ಸಮೇತ ಶ್ರೀಮನ್ನಾರಾಯಣ ಸ್ವಾಮಿಯ ದರ್ಶನ ಪಡೆದು ಪುನೀತರಾಗುತ್ತಾರೆಂಬ ನಂಬಿಕೆಯಿದೆ. ಅದರಂತೆ ವೀವರ್ಸ್‌ ಕಾಲನಿ, ಬಸವನಹಳ್ಳಿಯ 2 ದೇಗುಲಗಳಲ್ಲೂ ಪ್ರವೇಶ ದ್ವಾರದ ಉತ್ತರ ದಿಕ್ಕಿನಲ್ಲಿ ನಿರ್ಮಿಸಿದ್ದ ಸಪ್ತ ವೈಕುಂಠ ದ್ವಾರ ಭಕ್ತರನ್ನು ಆಕರ್ಷಿಸಿದವು. ಶ್ರೀ ದೇವಿ ಭೂದೇವಿ ಸಮೇತ ಶ್ರೀ ಲಕ್ಷ್ಮೀವೆಂಕಟರಮಣನನ್ನು ತೂಗುವ ಉಯ್ಯಲೆಯಲ್ಲಿ ಇಟ್ಟಿದ್ದು, ಕೆಳಭಾಗದಲ್ಲಿ ಹಾದು ಹೋಗಲು ವಿಶೇಷ ವ್ಯವಸ್ಥೆ ಮಾಡಲಾಗಿತ್ತು.

ಹನುಮ ದೇಗುಲಗಳಲ್ಲೂ ವಿಶೇಷ ಪೂಜೆ: ತಾಲೂಕಿನ ಐತಿಹಾಸಿಕ ಪ್ರಸಿದ್ಧ ಬೈರಶೆಟ್ಟಿಹಳ್ಳಿ ಮತ್ತು ಚೆನ್ನಪ್ಪ ಬಡಾವಣೆಯಲ್ಲಿ ಹನುಮನ ದೇವಾಲಯಗಳಲ್ಲೂ ವೈಕುಂಠ ಏಕಾದಶಿ ಆಚರಿಸಲಾಯಿತು.

ಸಾಮಾಜಿಕ ಅಂತರ ಮರೆತ ಭಕ್ತರು: ವೈಕುಂಠ ಏಕಾದಶಿಯ ಪ್ರಯುಕ್ತ ದೇವಾಲಯಗಳಿಗೆ ಆಗಮಿಸಿದ್ದ ಭಕ್ತರು ಮಾಸ್ಕ್ ಧರಿಸಿದ್ದು ದೇವರ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದ ವೇಳೆ ಸಾಮಾಜಿಕ ಅಂತರ ಮರೆತರು.