ಕಲಘಟಗಿ: ಭಗವದ್ಗೀತೆ ಮನುಕುಲದ ಉದ್ಧಾರದ ಪ್ರತಿಯೊಂದು ಅಂಶವನ್ನು ಒಳಗೊಂಡಿದ್ದು, ಜೀವನದಲ್ಲಿ ಯಾರು ಭಗ್ವದ್ಗೀತೆಯನ್ನು ಅಭ್ಯಾಸ ಮಾಡುತ್ತಾರೋ ಅವರು ಶ್ರೇಷ್ಠ ವ್ಯಕ್ತಿಯಾಗಿ ಜಗತ್ತಿಗೆ ಪರಿಚಯಿಸುತ್ತಾರೆ ಎಂದು ಶ್ರೀ ಭಗವದ್ಗೀತಾ ಅಭಿಯಾನ ಸಮಿತಿಯ ಗೋವಿಂದ ದಾಸ್ ಅಭಿಪ್ರಾಯಪಟ್ಟರು.
ಪಟ್ಟಣದ ನ್ಯಾಯಾಲಯದ ಸಭಾಂಗಣದಲ್ಲಿ ಸೋಮವಾರ ಇಸ್ಕಾನ್ ಮಂದಿರದ ಶ್ರೀ ಭಗವದ್ಗೀತಾ ಅಭಿಯಾನ ಸಮಿತಿ ವತಿಯಿಂದ ಆಯೋಜಿಸಿದ್ದ ಭಗವದ್ಗೀತಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಾನವನ ದೇಹದಲ್ಲಿ ಬಾಲ್ಯದಿಂದ ಯವ್ವನ ಹಾಗೂ ವೃದ್ದಾಪ್ಯದವರೆಗೂ ಇರುವ ಆತ್ಮವು ಮರಣದ ನಂತರ ಮತ್ತೊಂದು ದೇಹಕ್ಕೆ ಹೋಗಿ ಸ್ವಯಂ ಸಾಕ್ಷಾತ್ಕಾರಗೊಳ್ಳುತ್ತದೆ. ಜೀವನದ ಘಟ್ಟವನ್ನು ಅರ್ಥವತ್ತಾಗಿ ಅರ್ಥೈಸುವ ಜ್ಞಾನ ಭಂಡಾರ ಭಗವದ್ಗೀತೆಯಲ್ಲಿದೆ ಎಂದರು.
ಹಿರಿಯ ದಿವಾಣಿ ನ್ಯಾಯಾಧೀಶ ರವಿಂದ್ರ ಹೊನೋಲೆ ಮಾತನಾಡಿ, ಭಗವದ್ಗೀತೆಯಲ್ಲಿ ಲೌಕಿಕದಿಂದ ಅಲೌಕಿದ ಸಾರವನ್ನು ತಿಳಿಸಿದ್ದಾರೆ. ಯಾರು ಸರ್ವವಿದ್ಯ ವಿಶಾರಾದನಾಗಬೇಕೆಂಬುದನ್ನು ಭಯಸುತ್ತಾನೋ ಅವನು ಭಗವದ್ಗೀತೆ ಸಾರವನ್ನು ಅರಿತುಕೊಳ್ಳಬೇಕು ಎಂದರು.
ಕಿರಿಯ ದಿವಾಣಿ ನ್ಯಾಯಧೀಶ ಗಣೇಶ ಎನ್ ಮಾತನಾಡಿ, ಇಂದು ನಮ್ಮ ನ್ಯಾಯಾಲಯಗಳಲ್ಲಿ ನಡೆಯುವ ವ್ಯಾಜ್ಯಗಳ ಉತ್ತರವನ್ನು ಭಗವದ್ಗೀತೆಯಲ್ಲಿ ತಿಳಿಸಲಾಗಿದೆ. ನಾವು ಇಡುವ ಪ್ರತಿಯೊಂದು ಹೆಜ್ಜೆ ಧರ್ಮ ಮಾರ್ಗವಾಗಿ ಇಡಬೇಕು ಎಂದು ಶ್ರೀ ಕೃಷ್ಣ ಬೋಧಿಸಿದ್ದಾನೆ. ಆದ್ದರಿಂದ ಎಲ್ಲರೂ ತಮ್ಮ ಮನೆಯಲ್ಲಿನ ಮಕ್ಕಳಿಗೆ ಭಗವದ್ಗೀತೆಯನ್ನು ಓದಿಸಲು ಮುಂದಾಗಬೇಕು ಎಂದರು.
ಶ್ರೀ ಬಾಲಶಿವ ದಾಸ್, ವಕೀಲರ ಸಂಘದ ತಾಲೂಕು ಅಧ್ಯಕ್ಷ ಅಣ್ಣಪ್ಪ ಓಲೇಕಾರ, ವಕೀಲರಾದ ಎನ್.ಎಸ್. ಉಪಾಧ್ಯ, ಬಿ.ವಿ. ಪಾಟೀಲ, ರವೀಂದ್ರ ತೋಟಗಂಟಿ, ಮಾಂತೇಶ್ ಗಾಣಿಗೇರ, ಶೋಭಾ ಬಳಿಗೇರ, ವಿಜಯ ಗಾಣಿಗೇರ, ಮಹೇಶ ಪಾಟೀಲ, ಯಲ್ಲಪ್ಪ ಹೊಸಮನಿ ಇದ್ದರು