ಜಿಲ್ಲೆ

ರಾಜ್ಯಪಾಲರ ಮಧ್ಯೆ ಪ್ರವೇಶಕ್ಕೆ ಪಟ್ಟು

ಕೋಲಾರ ಡೆಸ್ಕ್

ಮುಳಬಾಗಿಲು: ರಾಜ್ಯಸರ್ಕಾರ ಹಿಂದು ವಿರೋಧಿ ನೀತಿ ಅನುಸರಿಸುತ್ತಿದೆ. ಹಿಂದುಗಳ ಭಾವನೆಗೆ ಧಕ್ಕೆ ತರುತ್ತಿದೆ ಎಂದು ಆರೋಪಿಸಿ ಬಜರಂಗದಳ ಮತ್ತು ಹಿಂದುಪರ ಸಂಘಟನೆ ಮುಖಂಡರು ತಾಲೂಕು ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿ, ಉಪ ತಹಸಿಲ್ದಾರ್​ ಆರ್​.ಕೊಂಡಪ್ಪ ಅವರಿಂದ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಗೌರಿ ಗಣೇಶ ಹಬ್ಬ ಹಿಂದುಗಳ ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಹಿನ್ನೆಲೆ ಕೂಡಿದ್ದು, ಜತೆಗೆ ದೇಶದ ಸ್ವಾತಂತ್ರ್ಯಕ್ಕೆ ಬ್ರಿಟಿಷರ ವಿರುದ್ಧ ಹೋರಾಡುವ ಸಂದರ್ಭದಲ್ಲಿ ಬಾಲಗಂಗಾಧರ ತಿಲಕ್​ ಅವರು ಸಾರ್ವಜನಿಕ ಗಣೇಶೋತ್ಸವಗಳ ಮೂಲಕ ಸಂಘಟಿಸಿ ಯುವಕರನ್ನು, ಸಾರ್ವಜನಿಕರನ್ನು ರಾಷ್ಟ್ರೀಯ ಪ್ರೇಮಿಗಳಲ್ಲಿ ಹೋರಾಟದ ಕಿಚ್ಚನ್ನು ಹಚ್ಚುವ ಮೂಲಕ ದೇಶದ ಸ್ವಾತಂತ್ರ್ಯಕ್ಕೆ ಪ್ರಮುಖ ಕೊಡುಗೆಯಾಗಿದ್ದು ಇಂತಹ ವಿಘ್ನೇಶ್ವರನ ಮೆರವಣಿಗೆಗಳ ಮೇಲೆ ಮತಾಂಧ ಕೆಲ ಮುಸ್ಲಿಂ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿರುವುದು ಒಂದು ಪೂರ್ವ ನಿಯೋಜಿತ ಷಡ್ಯಂತ್ರವಾಗಿದೆ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್​ ಸರ್ಕಾರ ಇಂಥವರ ಪರವಾಗಿ ಮೃದು ಧೋರಣೆ ಕಾರಣವಾಗಿದ್ದು, ಈ ಬಗ್ಗೆ ಪೊಲೀಸ್​ ಅಧಿಕಾರಿಗಳಿಗೆ ಮತ್ತು ರಾಜ್ಯ ಸರ್ಕಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಬೇಕೆಂದು ರಾಜ್ಯಪಾಲರಿಗೆ ಬಜರಂಗದಳ ಜಿಲ್ಲೆ ಸಂಯೋಜಕ ಆರ್​. ವಿಶ್ವನಾಥ್​ ಒತ್ತಾಯಿಸಿದರು.

ನಗರ ಸಂಚಾಲಕ ಎಸ್​. ಮಂಜುನಾಥ್​ ಮಾತನಾಡಿ, ಗಣೇಶ ವಿಸರ್ಜನೆಯಲ್ಲಿ ಇಲ್ಲಸಲ್ಲದ ನಿಬಂಧನೆ ವಿಧಿಸಿ ಭಕ್ತರ ಮೇಲೆ ಹೇರುತ್ತಿದೆ. ಹಲವು ಕಡೆ ಧ್ವನಿವರ್ಧಕ ಬಳಸಲು ನಿಷೇಧ ಮೂಲಕ ತೊಂದರೆ ನೀಡಲಾಗಿದೆ. ರಾಜ್ಯದ ಮಂಡ್ಯ ಜಿಲ್ಲೆ ಮದ್ದೂರು, ಶಿವಮೊಗ್ಗ ಜಿಲ್ಲೆಯ ಸಾಗರ ಮತ್ತಿತ್ತರ ಕಡೆ ಗಣೇಶನ ಶೋಭಾಯಾತ್ರೆ ಮೆರವಣಿಗೆ ಮೇಲೆ ಅಲ್ಪಸಂಖ್ಯಾತ ಎಂಬ ಹಣಿ ಪಟ್ಟಿಯೊಂದಿಗೆ ಕಿಡಿಗೇಡಿಗಳು ಗಣೇಶನಿಗೆ ಕಲ್ಲು ತೂರಾಟ ಮಾಡಿದ್ದರೂ ಪರೋಕ್ಷವಾಗಿ ಪ್ರೋತ್ಸಾಹ ನೀಡುತ್ತಿದೆ ಎಂದು ಆರೋಪಿಸಿದರು.

ಗ್ರಾಮಾಂತರ ಸಂಚಾಲಕ ಅರ್ಜುನ್​ ಗೌಡ, ಪದಾಧಿಕಾರಿಗಳಾದ ಪಳ್ಳಿಗರಪಾಳ್ಯ ಕುಮಾರ್​, ವಿ.ಎಚ್​.ಪಿ.ಡಿಶ್​ ಮಣಿ, ವಿರಾಟ್​, ಮಾರುತಿ ನಗರ ಹರೀಶ್​, ಮಹೇಶ್​, ಶಿವ, ಗೋವಿಂದರಾಜು, ಎನ್​.ಮನು, ಮಧು, ಮುನಿರಾಜು, ಹಿಂದೂಪರ ಸಂಘಟನೆ ಮುಖಂಡರಾದ ಕೆ. ಶಂಕರ್​ ಕೇಸರಿ, ನಂದ ಕಿಶೋರ್​, ಬಿಜೆಪಿ ಮುಖಂಡರಾದ ಕಲ್ಲುಪಲ್ಲಿ ಕೆ.ಜೆ.ಮೋಹನ್​, ಕೆ.ಎಚ್​.ಕೋಳಿ ನಾಗರಾಜ್​ ಇತರರು ಇದ್ದರು.